ಗೋವಾದಲ್ಲಿ ಇಂದು ನಡೆಯಬೇಕಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಅನಿವಾರ್ಯ ಕಾರಣಗಳಿಂದಾಗಿ ಮುಂದೂಡಲಾಗಿದೆ. ಕೇಂದ್ರದ ನಾಯಕರು ಇಂದು ದೆಹಲಿಯಿಂದ ಪಣಜಿಗೆ ಆಗಮಿಸುವ ನಿರೀಕ್ಷೆ ಇದೆ. ಆದರೆ ಪ್ರಧಾನಿ ಮೋದಿ ಗುಜರಾತ್ ಪ್ರವಾಸದ ಹಿನ್ನೆಲೆಯಲ್ಲಿ ಕೇಂದ್ರ ಸಂಸದೀಯ ಮಂಡಳಿಯ ಸಭೆಯು ವಿಳಂಬವಾದ ಕಾರಣ ಕೇಂದ್ರದ ನಾಯಕರಿಗೆ ಗೋವಾದ ರಾಜಧಾನಿಯನ್ನು ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗಲಿಲ್ಲ.
ಶಾಸಕಾಂಗ ಪಕ್ಷದ ನಾಯಕರನ್ನು ಆಯ್ಕೆ ಮಾಡಲು ಹೊಸದಾಗಿ ಚುನಾಯಿತರಾದ 20 ಮಂದಿ ಶಾಸಕರನ್ನು ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಹಾಗೂ ಪಿಯೂಷ್ ಗೋಯೆಲ್ ಭೇಟಿಯಾಗಲಿದ್ದಾರೆ ಎನ್ನಲಾಗಿದೆ.
ಗೋವಾದಲ್ಲಿ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆಯು ನಾಳೆ ಅಥವಾ ಸೋಮವಾರ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಿದ ಬಳಿಕ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಪಕ್ಷವು ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈರನ್ನು ಭೇಟಿ ಮಾಡಲಿದೆ.
ಗೋವಾ ವಿಧಾನಸಭೆಯ ಅಧಿಕಾರಾವಧಿಯು ಮಾರ್ಚ್ 16ಕ್ಕೆ ಮುಕ್ತಾಯಗೊಳ್ಳಲಿದೆ. ಸಂವಿಧಾನದ ಪ್ರಕಾರ ವಿಧಾನಸಭೆಯ ಅವಧಿ ಮುಗಿಯುವ ಮುನ್ನ ಹೊಸ ಸರ್ಕಾರ ಅಧಿಕಾರ ವಹಿಸಿಕೊಳ್ಳಬೇಕು.
ಈ ಮಧ್ಯೆ, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಗೆ ದಾರಿ ಮಾಡಿಕೊಡಲು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.