
ಫುಟ್ಬಾಲ್ ಬಹಳ ರೋಮಾಂಚನಕಾರಿ ಆಟಗಳಲ್ಲೊಂದು. ಕ್ಷಣಕ್ಷಣಕ್ಕೂ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುತ್ತದೆ. ಫುಟ್ಬಾಲ್ ಮೈದಾನದಲ್ಲಿ ಆಟಗಾರರ ಉತ್ಸಾಹವನ್ನು ನೋಡುವುದೇ ಒಂದು ಸಂಭ್ರಮ. ತಮ್ಮ ಫೇವರಿಟ್ ಪ್ಲೇಯರ್ ಗೋಲು ಹೊಡೆದಾಗ ಅಭಿಮಾನಿಗಳು ವಿಶಿಷ್ಟವಾಗಿ ಸಂಭ್ರಮಿಸುವುದನ್ನು ನೀವು ನೋಡಿರ್ತೀರಾ.
ಅನೇಕ ಬಾರಿ ಫುಟ್ಬಾಲ್ ಆಟಗಾರರು ಕೂಡ ಗೋಲು ಹೊಡೆದ ಖುಷಿಯನ್ನು ವಿಶೇಷವಾಗಿಯೇ ಸೆಲೆಬ್ರೇಟ್ ಮಾಡ್ತಾರೆ. ಇಂಗ್ಲೆಂಡ್‌ನ ಫುಟ್ಬಾಲ್ ಆಟಗಾರ್ತಿಯೊಬ್ಬರು ಗೆದ್ದ ಖುಷಿಯಲ್ಲಿ ತಮ್ಮ ಟೀಶರ್ಟ್ ತೆಗೆದು ಹಾಕಿ ಸಂಭ್ರಮಿಸಿದ್ದಾರೆ. ಮಹಿಳೆಯರ ಯುರೋ ಕಪ್ ಫುಟ್ಬಾಲ್ ಟೂರ್ನಿಯ ಫೈನಲ್‌ನಲ್ಲಿ ಇಂಗ್ಲೆಂಡ್ ಮತ್ತು ಜರ್ಮನಿ ತಂಡಗಳು ಮುಖಾಮುಖಿಯಾಗಿದ್ದವು. ಉಭಯ ತಂಡಗಳು ಕೊನೆಯವರೆಗೂ 1-1 ಗೋಲುಗಳಿಂದ ಸಮಬಲ ಹೊಂದಿದ್ದವು.

ಆದರೆ ಹೆಚ್ಚುವರಿ ಸಮಯದಲ್ಲಿ ಇಂಗ್ಲೆಂಡ್‌ನ ಕ್ಲೋಯ್ ಕೆಲ್ಲಿ ಅದ್ಭುತ ಗೋಲು ಗಳಿಸಿ ತಂಡಕ್ಕೆ ಯುರೋ ಕಪ್ ಚಾಂಪಿಯನ್ ಪಟ್ಟ ತಂದುಕೊಟ್ಟರು. ಈ ಪಂದ್ಯವನ್ನು ಇಂಗ್ಲೆಂಡ್ 2-1 ಅಂತರದಿಂದ ಗೆದ್ದುಕೊಂಡಿತು. ಕೆಲ್ಲಿ ಗೋಲು ಹೊಡೆದ ಖುಷಿಯಲ್ಲಿ ಮೈದಾನದಲ್ಲಿದ್ದ ಸಾವಿರಾರು ಪ್ರೇಕ್ಷಕರ ನಡುವೆಯೇ ಟೀ ಶರ್ಟ್ ತೆಗೆದಿದ್ದಾರೆ. ಫೈನಲ್ ಪಂದ್ಯವಾಗಿದ್ದರಿಂದ ಇದನ್ನು ವೀಕ್ಷಿಸಲು ಸುಮಾರು 87,000 ಪ್ರೇಕ್ಷಕರು ಮೈದಾನದಲ್ಲಿದ್ದರು. ಸಾಮಾನ್ಯವಾಗಿ ಆಟಗಾರರು ಈ ರೀತಿ ಜೆರ್ಸಿ ತೆಗೆದು ಸಂಭ್ರಮಿಸ್ತಾರೆ.
ಆದ್ರೆ ಕೆಲ್ಲಿ ಈ ರೀತಿ ಟೀಶರ್ಟ್ ತೆಗೆದು ಸೆಲೆಬ್ರೇಟ್ ಮಾಡಿರೋದು ಅಚ್ಚರಿ ಮೂಡಿಸಿದೆ. 1999ರ ವಿಶ್ವಕಪ್ ಫೈನಲ್ ಗೆದ್ದ ನಂತರ ಅಮೆರಿಕದ ಬ್ರಾಡಿ ಚಸ್ಟೈನ್ ಕೂಡ ಇದೇ ರೀತಿ ಮಾಡಿದ್ದರು. ಸದ್ಯ ಇಡೀ ಜಗತ್ತು ಕೆಲ್ಲಿಯ ಟಿ-ಶರ್ಟ್ ಅನ್ನು ಮಹಿಳಾ ಸಬಲೀಕರಣದ ಒಂದು ರೂಪವೆಂಬಂತೆ ನೋಡುತ್ತಿದೆ. ಆಟಗಾರರು ಟೀ ಶರ್ಟ್ ತೆಗೆದಂತೆ ಆಟಗಾರ್ತಿಯರೂ ಯಾಕೆ ಮಾಡಬಾರದೆಂದು ಕೆಲವರು ಪ್ರಶ್ನೆ ಎತ್ತಿದ್ದಾರೆ. ಅದೇನೇ ಆದ್ರೂ ಈ ಘಟನೆಯಿಂದಾಗಿ ಕೆಲ್ಲಿ ಫುಟ್ಬಾಲ್ ಜಗತ್ತಿನ ಗಮನ ಸೆಳೆದಿದ್ದಾರೆ.