ಬೆಂಗಳೂರು: ಕೇಂದ್ರ ಸಚಿವರ ಸ್ವಾಗತಕ್ಕೆ ನಾಡಬಂದೂಕುಗಳಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಲಾಗಿದೆ ಎಂದರೆ ರಾಜ್ಯ ಸರ್ಕಾರ, ಗೃಹ ಸಚಿವರು ಕಾನೂನು ಸುವ್ಯವಸ್ಥೆ ಕಾಪಾಡುವುದನ್ನು ಬಿಟ್ಟು ಏನು ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಬೆಂಗಳೂರಿನ ದೊಡ್ಡಬೆಳವಂಗಲದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಶಾಸಕರು, ಸಂಸದರು ಬಂದೂಕು ಸಂಸ್ಕೃತಿ ಅನುಸರಿಸುತ್ತಿದ್ದಾರೆ ಎಂದರೆ ಗೂಂಡಾ ರಾಜ್ಯ ಮಾಡಲು ಹೊರಟಿದ್ದಾರೆಯೇ ? ಬಂದೂಕುಗಳಿಗೆ ಪರವಾನಗಿ ಕೊಟ್ಟವರಾರು ? ತಪ್ಪು ಮಾಡಿದವರ ವಿರುದ್ಧ ಈವರೆಗೂ ಕ್ರಮ ಜರುಗಿಸಿಲ್ಲವೇಕೆ ? ಬಂದೂಕುಗಳಿಗೆ ಅನುಮತಿ ಕೊಟ್ಟವರಾರು ? ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಿಲ್ಲವೆಂದರೆ ಗೃಹ ಸಚಿವರು ರಾಜೀನಾಮೆ ಕೊಡಲಿ ಎಂದು ಗುಡುಗಿದ್ದಾರೆ.
ಕೇಂದ್ರ ಸರ್ಕಾರ, ಕೇಂದ್ರ ಸಚಿವರಿಗೆ ಒಂದು ನ್ಯಾಯನಾ ? ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೇ ಸರ್ಕಾರ, ಮುಖ್ಯಮಂತ್ರಿಗಳು ಸುಮ್ಮನಿದ್ದಾರೆ. ಸಿಎಂ ಬೊಮ್ಮಾಯಿ ಅವರಿಗೆ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವ ಶಕ್ತಿಯಿಲ್ಲವೇ ಎಂದು ಕೇಳಿದ್ದಾರೆ.
ಇದೇ ವೇಳೆ ವಿಧಾನಮಂಡಲ ಅಧಿವೇಶನ ವಿಚಾರವಾಗಿ ಮಾತನಾಡಿದ ಡಿ.ಕೆ. ಶಿವಕುಮಾರ್, ಸಿಎಂ ಉತ್ತರ ಕರ್ನಾಟಕ ಭಾಗದವರು ಹಾಗಾಗಿ ಈ ಬಾರಿ ಬೆಳಗಾವಿಯಲ್ಲಿ ಅಧಿವೇಶನ ಮಾಡಬಹುದಿತ್ತು. ಆದರೆ ಮಾಡುತ್ತಿಲ್ಲ ಕಾರಣ ಉತ್ತರ ಕರ್ನಾಟಕ ಭಾಗದವರನ್ನು ನಿರ್ಲಕ್ಷಿಸಲಾಗಿದೆ. ಈವರೆಗೂ ನೆರೆ ಪರಿಹಾರ, ಬೆಳೆ ಪರಿಹಾರ ನೀಡಿಲ್ಲ. ಹಾಗಾಗಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಿದರೆ ಸಂತ್ರಸ್ತರು ಬಂದು ಕೇಳುತ್ತಾರೆ ಎಂಬ ಭಯದಿಂದ ಬೆಂಗಳೂರಿನಲ್ಲಿ ಅಧಿವೇಶನ ನಡೆಸುತ್ತಿದ್ದಾರೆ. ಇಲ್ಲವಾದರೆ ಈ ಬಾರಿ ಬೆಳಗಾವಿಯಲ್ಲಿ ಮುಂಗಾರು ಅಧಿವೇಶ ಮಾಡಬಹುದಿತ್ತು. ಜನಸೇವೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.