ಐಟಿ ಕಂಪನಿಗಳು ಉದ್ಯೋಗ ಕಡಿತವನ್ನು ಮುಂದುವರಿಸಿವೆ. ಟೆಕ್ ದೈತ್ಯ ಗೂಗಲ್ ಕೂಡ ಮತ್ತಷ್ಟು ನೌಕರರನ್ನು ವಜಾ ಮಾಡ್ತಿದೆ. ಭಾರತದ ವಿವಿಧ ಇಲಾಖೆಗಳಲ್ಲಿ ಸುಮಾರು 450 ಉದ್ಯೋಗಿಗಳನ್ನು ಗೂಗಲ್ ವಜಾ ಮಾಡಿದೆ. ಗುರುವಾರ ತಡರಾತ್ರಿ ಉದ್ಯೋಗಿಗಳಿಗೆ ತಮ್ಮನ್ನು ವಜಾಗೊಳಿಸುವ ಬಗ್ಗೆ ಅಂಚೆ ಮೂಲಕ ತಿಳಿಸಲಾಗಿದೆ. ಗೂಗಲ್ ಇಂಡಿಯಾದ ಮುಖ್ಯಸ್ಥ ಮತ್ತು ಉಪಾಧ್ಯಕ್ಷ ಸಂಜಯ್ ಗುಪ್ತಾ, ಉದ್ಯೋಗಿಗಳಿಗೆ ಮೇಲ್ ರವಾನಿಸಿದ್ದಾರಂತೆ. ಈ ಬೆಳವಣಿಗೆ ಕುರಿತಂತೆ ಗೂಗಲ್ ಇಂಡಿಯಾ ಅಧಿಕೃತವಾಗಿ ಇನ್ನೂ ಪ್ರತಿಕ್ರಿಯಿಸಿಲ್ಲ.
ಕಳೆದ ತಿಂಗಳು ಗೂಗಲ್‌ನ ಪೋಷಕ ಕಂಪನಿ ಆಲ್ಫಾಬೆಟ್ ಇಂಕ್, 12,000 ಉದ್ಯೋಗ ಕಡಿತ ಮಾಡುವುದಾಗಿ ಘೋಷಿಸಿತ್ತು. ಈಗ ಕೆಲಸದಿಂದ ತೆಗೆದುಹಾಕಿರುವ 453 ನೌಕರರು ಅದರೊಳಗೆ ಸೇರಿದ್ದಾರೆಯೇ ಅಥವಾ ಇದು ಪ್ರತ್ಯೇಕ ಪ್ರಕ್ರಿಯೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆಲ್ಫಾಬೆಟ್ ಇಂಕ್‌ನ ಸಿಇಓ ಆಗಿರುವ ಸುಂದರ್ ಪಿಚೈ ಉದ್ಯೋಗ ಕಡಿತದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. ಕಂಪನಿಯ ಬೆಳವಣಿಗೆಯು ನಿಧಾನವಾಗುತ್ತಿದ್ದಂತೆ ನಿರ್ಣಾಯಕವಾಗಿ ಕಾರ್ಯನಿರ್ವಹಿಸುವ ಅಗತ್ಯವಿರುವುದರಿಂದ ವಜಾ ಪ್ರಕ್ರಿಯೆ ಅನಿವಾರ್ಯ ಎಂದಿದ್ದರು.
ಈ ಮಧ್ಯೆ ಆಲ್ಫಾಬೆಟ್ ಮಾಲೀಕತ್ವದ ಯೂಟ್ಯೂಬ್ ಭಾರತೀಯ ಮೂಲದ ಅಮೆರಿಕನ್ ನೀಲ್ ಮೋಹನ್ ಅವರನ್ನು ತನ್ನ ಮುಂದಿನ CEO ಆಗಿ ನೇಮಿಸಿದೆ. ಜನವರಿ ಲ್ಲಿ ಮೈಕ್ರೋಸಾಫ್ಟ್ 10,000 ಉದ್ಯೋಗ ಕಡಿತಗಳನ್ನು ಘೋಷಿಸಿತ್ತು. ಅಮೆಜಾನ್ ಕೂಡ 18,000 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುತ್ತಿದೆ. ಮೆಟಾ ಸಹ ಕ 11,000 ಕ್ಕೂ ಹೆಚ್ಚು ಕೆಲಸಗಾರರನ್ನು ಕಿತ್ತು ಹಾಕಿದೆ. ಇದೇ ರೀತಿ ಹಲವು ಜನಪ್ರಿಯ ಸಂಸ್ಥೆಗಳು ಉದ್ಯೋಗಿಗಳ ವಜಾ ಪ್ರಕ್ರಿಯೆ ನಡೆಸುತ್ತಿದ್ದು, ತೀವ್ರ ನಿರುದ್ಯೋಗ ಸೃಷ್ಟಿಯ ಭೀತಿ ಎದುರಾಗಿದೆ.