ವಿಧಾನಸಭಾ ಚುನಾವಣೆಗೆ ಇನ್ನು ಐದಾರು ತಿಂಗಳು ಇರುವ ಮಧ್ಯೆ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಅದರಲ್ಲೂ ಕಾಂಗ್ರೆಸ್ ಚುಕ್ಕಾಣಿ ರಾಜ್ಯದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಕ್ಕಿದ ಬಳಿಕ ಈ ಬೆಳವಣಿಗೆಗೆ ಮತ್ತಷ್ಟು ವೇಗ ಸಿಕ್ಕಿದೆ.
ಕಾಂಗ್ರೆಸ್ ತೊರೆಯಲಿದ್ದಾರೆ ಎಂದು ಹೇಳಲಾಗುತ್ತಿದ್ದ ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾದ ಬಳಿಕ ತಮ್ಮ ಮನಸ್ಸು ಬದಲಿಸಿದ್ದಾರೆ. ಇದರ ಮಧ್ಯೆ ಬಿಜೆಪಿ ವಿಧಾನಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರನ್ನು ಭೇಟಿಯಾಗಿದ್ದು ತೀವ್ರ ಕುತೂಹಲ ಕೆರಳಿಸಿತ್ತು.
ಹೀಗಾಗಿ ಅವರು ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎಂಬ ವದಂತಿ ಹಬ್ಬಿದ್ದು ಇದಕ್ಕೆ ಸ್ಪಷ್ಟನೆ ನೀಡಿರುವ ಬಾಬುರಾವ್ ಚಿಂಚನಸೂರ್, ವೀರಪ್ಪ ಮೊಯ್ಲಿ ಕಾಂಗ್ರೆಸ್ ಸೇರಲು ಹೇಳಿದ್ದು ನಿಜ. ಆದರೆ ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ ಎಂದಿದ್ದಾರೆ.
ಬಿಜೆಪಿ ಹೈಕಮಾಂಡ್, ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಿ ನನಗೆ ದೊಡ್ಡ ಜವಾಬ್ದಾರಿ ನೀಡಿದೆ. ಅಲ್ಲದೆ ಗುರುಮಿಟ್ಕಲ್ ಬಿಜೆಪಿ ಟಿಕೆಟ್ ನನ್ನ ಜೇಬಿನಲ್ಲಿಯೇ ಇದೆ. ಅಲ್ಲಿಂದಲೇ ತಾವು ಸ್ಪರ್ಧಿಸುವುದಾಗಿ ಹೇಳಿದ ಅವರು, ಸಂಪುಟ ವಿಸ್ತರಣೆ ಆದರೆ ನನ್ನನ್ನು ಮಂತ್ರಿಯನ್ನಾಗಿ ಮಾಡುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.