ಚಿಕ್ಕಬಳ್ಳಾಪುರ: ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವ ನೋವು ಇದ್ಯಾಲ್ವಾ ಅದನ್ನು ಪದಗಳಲ್ಲಿ ವಿವರಿಸಲಾಗುವುದಿಲ್ಲ. ಆದರೂ ಅವರು ಮೃತಪಟ್ಟ ನಂತರ ದುಃಖತಪ್ತ ಕುಟುಂಬದ ಸದಸ್ಯರು ಕಾರ್ಯ ಮಾಡಲೇಬೇಕಾಗುತ್ತದೆ. 11ನೇ ದಿನದ ಕಾರ್ಯ, ತಿಥಿಕಾರ್ಯ ನೆರವೇರಿಸಲಾಗುತ್ತದೆ.
ಹಾಗೆಯೇ ಕೆಲವರು ತಮ್ಮ ಸಾಕು ಪ್ರಾಣಿಗಳು ಸತ್ತರೂ ಕೂಡ ಇಂತಹ ಕಾರ್ಯಗಳನ್ನು ಮಾಡುತ್ತಾರೆ. ಆದರೆ, ಇಲ್ಲೊಂದೆಡೆ ಕ್ಷೀಣಿಸುತ್ತಿರುವ ಪಕ್ಷಿ ಸಂಕುಲವಾದ ಗುಬ್ಬಚ್ಚಿಯ 11ನೇ ದಿನದ ಕಾರ್ಯ ನೆರವೇರಿಸಲಾಗಿದೆ.
ಚಿಕ್ಕಬಳ್ಳಾಪುರದ ಶಿಢ್ಲಘಟ್ಟ ತಾಲೂಕಿನ ಬಸವ ಪಟ್ಟಣದಲ್ಲಿ ಈ ಹೃದಯಸ್ಪರ್ಶಿ ಘಟನೆ ನಡೆದಿದೆ. ಮೃತಪಟ್ಟ ಗುಬ್ಬಚ್ಚಿಯ 11ನೇ ದಿನದ ಕಾರ್ಯ ಮಾಡಲಾಗಿದ್ದು, ಪೆಂಡಾಲ್ ಹಾಕಿ ಜನರಿಗೆ ಬಾಡೂಟ ಸಹ ಹಾಕಲಾಗಿದೆ.
ಗ್ರಾಮದಲ್ಲಿ ವಾಸಿಸುತ್ತಿದ್ದ ಗುಬ್ಬಚ್ಚಿಯೊಂದು ಎಲ್ಲರಿಗೂ ಪ್ರಿಯವಾಗಿತ್ತು. ಜನರು ಇದಕ್ಕೆ ಕಾಳು ಹಾಕಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಗ್ರಾಮಸ್ಥರೆಲ್ಲರೂ ಗುಬ್ಬಚ್ಚಿಯನ್ನು ಬಹುವಾಗಿ ಹಚ್ಚಿಕೊಂಡಿದ್ದರು. ಆದರೆ, ದುರಾದೃಷ್ಟವಶಾತ್ ಜನವರಿ 26ರಂದು ಗುಬ್ಬಚ್ಚಿ ಮೃತಪಟ್ಟಿದೆ.
ಈ ಸುದ್ದಿ ಗೊತ್ತಾಗುತ್ತಿದ್ದ ಕೂಡಲೇ ದುಃಖತಪ್ತ ಗ್ರಾಮಸ್ಥರು ಗುಬ್ಬಚ್ಚಿಯ ನೆನಪನ್ನು ಸದಾ ಹಸಿರಾಗಿಡೋದಕ್ಕೆ ನಿರ್ಧರಿಸಿ, ಅದರ ಅಂತಿಮ ಕಾರ್ಯ ನೆರವೇರಿಸಿದ್ದಾರೆ. ಅಲ್ಲದೆ ಅದಕ್ಕೆಂದೇ ಸಮಾಧಿ ಮಾಡಿ, 11ನೇ ದಿನದ ಕಾರ್ಯವನ್ನು ಕೂಡ ಮಾಡಿದ್ದಾರೆ. ಮತ್ತೆ ಹುಟ್ಟಿ ಬಾ ಎಂಬ ಬ್ಯಾನರ್ ಅನ್ನು ಕೂಡ ಅಳವಡಿಸಲಾಗಿತ್ತು.
ಗುಬ್ಬಚ್ಚಿಗೆ ಅಂತಿಮ ಕಾರ್ಯ ನೆರವೇರಿಸಿದ್ದರ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪಕ್ಷಿ ಪ್ರೇಮಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.