ಯುಜಿಸಿಯು ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಿದ ಬಳಿಕ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೂ ಮಾತೃತ್ವ ಅಥವಾ ಶಿಶುಪಾಲನಾ ರಜೆಯ ಸೌಕರ್ಯವನ್ನು ಶೀಘ್ರದಲ್ಲೇ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.
ಯುಪಿ ಹಾಗೂ ಪಿಜಿ ಹಂತಗಳಲ್ಲೂ ಮಹಿಳೆಯರಿಗೆ ಮಾತೃತ್ವ ರಜೆಯ ಸೌಕರ್ಯಗಳನ್ನು ವಿಸ್ತರಿಸಲು ಮಾರ್ಗಸೂಚಿಗಳನ್ನು ರೂಪಿಸುವಂತೆ ಯುಜಿಸಿ ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಿದ ಬಳಿಕ ಇದಕ್ಕೆ ಉನ್ನತ ಶಿಕ್ಷಣ ಇಲಾಖೆ ಕೂಡ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದೆ.
ಈ ರೀತಿಯ ಒಂದು ಸೌಲಭ್ಯವನ್ನು ಒದಗಿಸುವುದರಿಂದ ಮಹಿಳಾ ವಿದ್ಯಾರ್ಥಿನಿಯರು ಉನ್ನತ ವ್ಯಾಸಂಗವನ್ನು ಮಾಡಲು ಇಚ್ಛಿಸುತ್ತಾರೆ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಮುಂದಿನ ಸಭೆಯಲ್ಲಿ ಇಲಾಖೆಯು ಈ ವಿಚಾರದ ಬಗ್ಗೆ ಚರ್ಚೆ ನಡೆಸಲಿದೆ. ಈ ಸಭೆಯಲ್ಲಿ ಎಲ್ಲಾ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಭಾಗಿಯಾಗಲಿದ್ದಾರೆ ಎಂದು ಹೇಳಿದೆ.