2021-22 ರ ಕೇಂದ್ರ ಬಜೆಟ್ ನಲ್ಲಿ ವಾಹನಗಳಿಗೆ ಸಂಬಂಧಿಸಿದಂತೆ ಹೊಸ ನೀತಿ ಒಂದನ್ನು ಘೋಷಿಸಿದ್ದು, ಇದರ ಪ್ರಕಾರ ಖಾಸಗಿ ವಾಹನಗಳು 20 ವರ್ಷಗಳ ನಂತರ ಮತ್ತು ವಾಣಿಜ್ಯ ವಾಹನಗಳು 15 ವರ್ಷದ ನಂತರ ಫಿಟ್ನೆಸ್ ಪರೀಕ್ಷೆಯನ್ನು ಮಾಡಿಸಬೇಕಾಗಿದೆ. ಅಲ್ಲದೆ ಹಳೆ ವಾಹನಗಳನ್ನು ನಿಷೇಧಿಸಲು ಸಹ ತೀರ್ಮಾನಿಸಲಾಗಿತ್ತು.
ಇದೀಗ ಕೇಂದ್ರ ಮತ್ತು ರಾಜ್ಯ ಸರ್ಕಾರಿಗಳಿಗೆ ಸೇರಿದ ಹಾಗೂ ಸಾರ್ವಜನಿಕ ವಲಯ ಸಂಸ್ಥೆಗಳ ಒಡೆತನದ ವಾಹನಗಳ ಕುರಿತಂತೆ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇವುಗಳಿಗೆ ಸೇರಿದ 15 ವರ್ಷಕ್ಕಿಂತ ಹಳೆಯದಾದ ಎಲ್ಲ ವಾಹನಗಳ ಸಂಚಾರ ಮತ್ತು ನೋಂದಣಿಯನ್ನು ರದ್ದುಗೊಳಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿರ್ಧರಿಸಿದೆ.
ಏಪ್ರಿಲ್ 1ರಿಂದ ಈ ನಿಯಮ ಜಾರಿಗೆ ಬರಲಿದ್ದು, ವಿಶೇಷ ಉದ್ದೇಶದ ವಾಹನಗಳಿಗೆ ಇದು ಅನ್ವಯಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ. ಹಳೆ ವಾಹನಗಳನ್ನು ರದ್ದುಗೊಳಿಸಿದ ಬಳಿಕ ಖರೀದಿಸುವ ಹೊಸ ವಾಹನಗಳಿಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಶೇಕಡ 25ರಷ್ಟು ತೆರಿಗೆ ರಿಯಾಯಿತಿಯನ್ನು ನೀಡಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.