ನವದೆಹಲಿ: ದೇಶದ ಗಮನ ಸೆಳೆದ ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ.
ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ಭಾರತೀಯ ಷೇರು ಮಾರುಕಟ್ಟೆಯ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ಸತತ 7ನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆರಲಿವೆ ಎಂದು ಸಮೀಕ್ಷೆಗಳು ಹೇಳಿವೆ. ಇದನ್ನು ಆಧರಿಸಿ ಮುಂಬೈ ಷೇರು ಮಾರುಕಟ್ಟೆಯಲ್ಲಿ ಉತ್ತಮ ವಾತಾವರಣ ಕಂಡು ಬಂದಿದೆ. ಚುನಾವಣೆ ಕಾರಣದಿಂದಾಗಿ ಷೇರು ಮಾರುಕಟ್ಟೆಯಲ್ಲಿ ಕೆಲವೊಮ್ಮೆ ಅನಿಶ್ಚಿತತೆ ಕಂಡುಬರುತ್ತದೆ.
ಬಜೆಟ್ ದಿನಗಳಂದು ಹಾಗೂ ಚುನಾವಣೆ ಫಲಿತಾಂಶದ ಸಂದರ್ಭದಲ್ಲಿ ಷೇರು ಮಾರುಕಟ್ಟೆಯಲ್ಲಿ ಪರಿಣಾಮ ಉಂಟಾಗುತ್ತದೆ. ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ಸಂದರ್ಭದಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಏರಿಕೆ ಕಂಡುಬಂದಿತ್ತು. ಹೂಡಿಕೆದಾರರ ಸಂಪತ್ತು ಏರಿಕೆಯಾಗಿತ್ತು. ಆದರೆ, 2017 ರಲ್ಲಿ ಗುಜರಾತ್ ಚುನಾವಣೆ ಫಲಿತಾಂಶದ ಸಂದರ್ಭದಲ್ಲಿ ಷೇರು ಮಾರುಕಟ್ಟೆ ಕುಸಿತ ಕಂಡಿತ್ತು.
ಇಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿ 9 ಗಂಟೆಯ ವೇಳೆಗೆ ಯಾವ ಪಕ್ಷಕ್ಕೆ ಮುನ್ನಡೆ ? ಹಿನ್ನಡೆ ಎನ್ನುವುದು ಗೊತ್ತಾಗುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿಯೂ ಏರಿಳಿತ ಕಾಣುವ ಸಾಧ್ಯತೆ ಇದೆ.
ಚುನಾವಣೆ ಮತ್ತು ಷೇರು ಮಾರುಕಟ್ಟೆಗೆ ನೇರ ಸಂಬಂಧ ಇಲ್ಲದಿದ್ದರೂ, ಮತ ಎಣಿಕೆ, ಮುನ್ನಡೆ, ಫಲಿತಾಂಶ ಆಧರಿಸಿ ಷೇರು ಮಾರುಕಟ್ಟೆಯಲ್ಲಿ ಏರಿಳಿತವಾಗುವುದಂತೂ ನಿಶ್ಚಿತ.