ಬೆಂಕಿ ಅವಘಡದಿಂದ ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ. ರಾಜ್ಯದ ಸೂರತ್ ಜಿಲ್ಲೆಯ ಪಲ್ಸಾನಾ ಪ್ರದೇಶದ ಪ್ರಿಂಟಿಂಗ್ ಮತ್ತು ಡೈಯಿಂಗ್ ಮಿಲ್‌ನಲ್ಲಿ ಗುರುವಾರ ಭಾರಿ ಬೆಂಕಿ ದುರಂತ ಸಂಭವಿಸಿದೆ.
ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಹತ್ತಾರು ಅಗ್ನಿಶಾಮಕ ವಾಹನಗಳು ಈಗಲೂ ಸ್ಥಳದಲ್ಲಿದ್ದು, ಜಿಲ್ಲೆಯ ಸಮೀಪದ ಪ್ರದೇಶಗಳಿಂದ ಸುಮಾರು 100 ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಸೌಮ್ಯ ಡೈಯಿಂಗ್ ಮತ್ತು ಪ್ರಿಂಟಿಂಗ್ ಮಿಲ್ ನಲ್ಲಿ ಗುರುವಾರ ಬೆಳಗಿನ ಜಾವ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ. ಮಿಲ್ ನಲ್ಲಿದ್ದ ಎರಡು ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ಸ್ಥಳದಲ್ಲಿದ್ದ ದಹನಕಾರಿ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದರಿಂದ ಕಟ್ಟಡದ ಮೂರು ಮಹಡಿಗಳು ಬೆಂಕಿಗೆ ಆಹುತಿಯಾಗಿವೆ.
ಮೂವರು ಕಾರ್ಮಿಕರ ಸುಟ್ಟ ದೇಹಗಳನ್ನು ಕಟ್ಟಡದಿಂದ ಹೊರತೆಗೆಯಲಾಗಿದ್ದು, ಸುಮಾರು 10 ಮಂದಿಯನ್ನು ರಕ್ಷಿಸಲಾಗಿದೆ. ಗ್ಯಾಸ್ ಸಿಲಿಂಡರ್‌ಗಳ ಸ್ಫೋಟದ ನಂತರ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಮಿಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಹೇಳಿದ್ದಾರೆ. ರಾಸಾಯನಿಕಗಳು, ಬಣ್ಣಗಳು ಮತ್ತು ನೂಲುಗಳಿದ್ದ ಕಾರಣ ಬೆಂಕಿ ತ್ವರಿತವಾಗಿ ಹರಡಿತು. ಸಿದ್ಧ ಉಡುಪುಗಳು ಮತ್ತು ಕಚ್ಚಾ ವಸ್ತುಗಳು ಸಹ ಕಟ್ಟಡದಲ್ಲಿ ಇದ್ದವು. ಎಂದು ಬಾರ್ಡೋಲಿಯ ಮುಖ್ಯ ಅಗ್ನಿಶಾಮಕ ಅಧಿಕಾರಿ ಪಿಬಿ ಗಧ್ವಿ ತಿಳಿಸಿದ್ದಾರೆ.
ಬೆಂಕಿಯ ಪ್ರಮಾಣ ಯಾವ ಮಟ್ಟಿಗೆ ಹೆಚ್ಚಿದೆ ಎಂದರೆ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿ ನಿಂತು ನೋಡಿದರು ಬೆಂಕಿ ಕಾಣಿಸುತ್ತಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.