ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳನ್ನು ಸಾಕುವುದು ಕೂಡ ಒಂಥರಾ ಟ್ರೆಂಡ್. ಅದರಲ್ಲೂ ನಾಯಿಗಳನ್ನು ಸಾಕೋದು ಫ್ಯಾಷನ್ ಆಗಿಬಿಟ್ಟಿದೆ. ಕೆಲವು ಶ್ವಾನಗಳಂತೂ ಇಡೀ ಜಗತ್ತಿನ ಗಮನ ಸೆಳೆಯುತ್ತಿವೆ. ಇತ್ತೀಚೆಗೆ ನೆಟ್‌ಫ್ಲಿಕ್ಸ್ ವಿಶ್ವದ ಅತ್ಯಂತ ಶ್ರೀಮಂತ ನಾಯಿಯ ಕುರಿತು ಸಾಕ್ಷ್ಯಚಿತ್ರವನ್ನು ಚಿತ್ರೀಕರಿಸುವುದಾಗಿ ಘೋಷಿಸಿದೆ. ಜಗತ್ತಿನ ಅತ್ಯಂತ ಶ್ರೀಮಂತ ನಾಯಿ ಜರ್ಮನಿಯಲ್ಲಿದೆ, ಅದು ಜರ್ಮನ್ ಶೆಫರ್ಡ್ ತಳಿಗೆ ಸೇರಿದೆ ಎಂಬ ಸುದ್ದಿ ಕೆಲ ಸಮಯದ ಹಿಂದೆ ಎಲ್ಲರ ಗಮನ ಸೆಳೆದಿತ್ತು.
ಈ ನಾಯಿಯ ಒಟ್ಟು ಆಸ್ತಿ 4100 ಕೋಟಿ ರೂಪಾಯಿ ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಸೇರಿದಂತೆ ವಿಶ್ವದ ಅನೇಕ ದೊಡ್ಡ ಸೆಲೆಬ್ರಿಟಿಗಳು ಕೂಡ ಅಷ್ಟು ಸಂಪತ್ತನ್ನು ಹೊಂದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿರುವ ಜರ್ಮನಿಯ ಬಿಲಿಯನೇರ್ ನಾಯಿಯ ಸುದ್ದಿ ಸಂಪೂರ್ಣ ನಕಲಿ ಅನ್ನೋದು ಇದೀಗ ಬಹಿರಂಗವಾಗಿದೆ. ಅದು ಪಕ್ಕಾ ಮಾರ್ಕೆಟಿಂಗ್ ತಂತ್ರ. ನೆಟ್‌ಫ್ಲಿಕ್ಸ್ ನಾಯಿಯ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಿಸುತ್ತಿದ್ದು, ನಾಯಿಯ ಶ್ರೀಮಂತಿಕೆಯ ಬಗ್ಗೆ ಊಹಾಪೋಹಗಳು ಎಲ್ಲಾ ಕಡೆ ಹಬ್ಬಿವೆ.
ವಾಸ್ತವವಾಗಿ ಶ್ರೀಮಂತ ಶ್ವಾನಗಳು ಭಾರತದಲ್ಲಿವೆ. ಇವರ ಹೆಸರಿನಲ್ಲಿ ಕೋಟಿಗಟ್ಟಲೆ ಆಸ್ತಿ ಇದೆ. ಗುಜರಾತ್‌ನ ಬನಸ್ಕಾಂತದ ಪಾಲನಪುರ ತಾಲೂಕಿನಲ್ಲಿ ಸಿರಿವಂತ ನಾಯಿಗಳಿವೆ. ಈ ನಾಯಿಯ ಆಸ್ತಿ 5 ಕೋಟಿ ರುಪಾಯಿ. ಇಲ್ಲಿ ರಾಜಪ್ರಭುತ್ವ ಇದ್ದಾಗ ನವಾಬರು ಆಡಳಿತ ನಡೆಸುತ್ತಿದ್ದರು. ಆದರೆ ಒಮ್ಮೆ ನವಾಬರು ಈ ಜಮೀನನ್ನು ಗ್ರಾಮಸ್ಥರಿಗೆ ನೀಡಿದ್ದರಂತೆ. ಆ ಭೂಮಿಯನ್ನು ಗ್ರಾಮಸ್ಥರು ನಾಯಿಗಳಿಗೆ ಹಸ್ತಾಂತರಿಸಿದ್ದರು. ಸದ್ಯ ಇಲ್ಲಿನ ನಾಯಿಗಳು ಎಕರೆಗಟ್ಟಲೆ ಭೂಮಿಯನ್ನು ಹೊಂದಿವೆ. ಸದ್ಯ ಈ ಭೂಮಿಯ ಬೆಲೆ 5 ಕೋಟಿ ರೂಪಾಯಿಗೂ ಅಧಿಕ. ಹಾಗಾಗಿ ಅತಿ ಶ್ರೀಮಂತ ನಾಯಿಗಳು ಗುಜರಾತ್‌ನಲ್ಲಿವೆ ಅಂದರೂ ತಪ್ಪೇನಿಲ್ಲ.