ಇತ್ತೀಚೆಗೆ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 5 ಸ್ಥಾನಗಳನ್ನು ಗಳಿಸಿದ್ದು, ಮುಂದಿನ ಚುನಾವಣೆ ವೇಳೆಗೆ ಮತ್ತಷ್ಟು ಗಟ್ಟಿಯಾಗಿ ಬೇರೂರುವ ವಿಶ್ವಾಸ ವ್ಯಕ್ತಪಡಿಸಿತ್ತು.
ವಿಧಾನಸಭೆಗೆ ಆಯ್ಕೆಯಾಗಿರುವ ನೂತನ ಶಾಸಕರುಗಳು ಇನ್ನೂ ಪ್ರಮಾಣವಚನ ಸ್ವೀಕರಿಸದಿರುವ ಮಧ್ಯೆ ಆಮ್ ಆದ್ಮಿ ಪಕ್ಷಕ್ಕೆ ಬಿಗ್ ಶಾಕ್ ಎದುರಾಗಿದೆ. ನೂತನವಾಗಿ ಆಯ್ಕೆಯಾಗಿರುವ ಐವರು ಆಪ್ ಶಾಸಕರುಗಳ ಪೈಕಿ ಓರ್ವ ಬಿಜೆಪಿ ಸೇರ್ಪಡೆಗೆ ಸಜ್ಜಾಗಿದ್ದಾರೆ.
ಹೌದು, ಜುನಾಗಢ್ ಜಿಲ್ಲೆಯ ವಿಶ್ವಧಾರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಭೂಪತ್ ಭಯಾನಿ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಈ ಮೊದಲು ಬಿಜೆಪಿಯಲ್ಲೇ ಇದ್ದ ಅವರು, ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದಿಂದ ಕಣಕ್ಕೆ ಇಳಿದಿದ್ದರು.
ತಮ್ಮ ಬಿಜೆಪಿ ಸೇರ್ಪಡೆ ವದಂತಿ ಕುರಿತು ಪ್ರತಿಕ್ರಿಯಿಸಿರುವ ಅವರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದು, ನಾನು ಬಿಜೆಪಿ ಸೇರ್ಪಡೆಗೊಳ್ಳುವುದು ಇನ್ನೂ ತೀರ್ಮಾನವಾಗಿಲ್ಲ. ಆದರೆ ಕ್ಷೇತ್ರದ ಅಭಿವೃದ್ಧಿಗೆ ನೆರವಾಗುತ್ತದೆಂದರೆ ಅಭಿಮಾನಿಗಳು ಹಾಗೂ ಮತದಾರರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.