ಗುರುಗ್ರಾಮ: ವಿಶೇಷ ಸಾಮರ್ಥ್ಯವುಳ್ಳ ಯುವತಿಗೆ ಹರಿಯಾಣದ ಗುರುಗ್ರಾಮದಲ್ಲಿರುವ ಪ್ರಸಿದ್ಧ ರೆಸ್ಟೋರೆಂಟ್ ಅವಮಾನ ಮಾಡಿದೆ ಎನ್ನಲಾಗಿದೆ. ಈಕೆ ಗಾಲಿಕುರ್ಚಿಯಲ್ಲಿದ್ದರಿಂದ ಪ್ರವೇಶ ನಿರಾಕರಿಸಲಾಗಿದೆ ಎಂದು ಆರೋಪಿಸಲಾಗಿದೆ.
ಇಡೀ ಘಟನೆಯ ಬಗ್ಗೆ ಟ್ವಿಟ್ಟರ್ ನಲ್ಲಿ ಯುವತಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ಇದು ತ್ವರಿತವಾಗಿ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಶುಕ್ರವಾರ ಸಂಜೆ ಗುರುಗ್ರಾಮದಲ್ಲಿರುವ ರಾಸ್ತಾಗೆ ತನ್ನ ಸ್ನೇಹಿತನ ಕುಟುಂಬದೊಂದಿಗೆ ಹೋಗಿದ್ದಾಗಿ ಸೃಷ್ಟಿ ಹೇಳಿದ್ದಾರೆ. ಆಕೆಯ ಸ್ನೇಹಿತೆಯ ಸಹೋದರ ಅವರಿಗಾಗಿ ಟೇಬಲ್ ಕಾಯ್ದಿರಿಸಲು ಹೋದಾಗ, ರೆಸ್ಟೋರೆಂಟ್‌ನ ಸಿಬ್ಬಂದಿ ಸಾರಾಸಗಟಾಗಿ ನಿರಾಕರಿಸಿದೆ. ಗಾಲಿಕುರ್ಚಿಯಲ್ಲಿ ಕುಳಿತಿದ್ದ ಸೃಷ್ಟಿಯನ್ನು ತೋರಿಸಿದ ಅವರು, ವೀಲ್ ಚೇರ್ ಒಳಗೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮೊದಲಿಗೆ, ಇದು ಪ್ರವೇಶದ ಸಮಸ್ಯೆ ಎಂದೇ ಅವರು ಭಾವಿಸಿದ್ದರು. ಆದರೆ ಸಿಬ್ಬಂದಿ ಹೇಳಿರುವ ಅರ್ಥ ಬೇರೆಯದೇ ಆಗಿತ್ತು. ಇದರಿಂದ ಒಳಗಿನ ಗ್ರಾಹಕರು ತೊಂದರೆಗೊಳಗಾಗುತ್ತಾರೆ ಅಂತಾ ಸಿಬ್ಬಂದಿ ತಮ್ಮ ದುರ್ವರ್ತನೆ ತೋರಿದ್ದಾರೆ.
ಸಾಕಷ್ಟು ವಾಗ್ವಾದದ ನಂತರ ಅವರನ್ನು ಚಳಿಯಲ್ಲಿ ಹೊರಗೆ ಕುಳಿತುಕೊಳ್ಳುವಂತೆ ಮಾಡಲಾಯಿತು. ಘಟನೆಯಿಂದ ತಾನು ಸಂಪೂರ್ಣ ಹೃದಯವಿದ್ರಾವಕಳಾಗಿದ್ದಾಗಿ ಸೃಷ್ಟಿ ದುಃಖ ವ್ಯಕ್ತಪಡಿಸಿದ್ದಾರೆ. ಇಡೀ ವಾಗ್ವಾದದ ವಿಡಿಯೋವನ್ನು ಸೃಷ್ಟಿ ಹಂಚಿಕೊಂಡಿದ್ದು, ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.
ಇನ್ನು ವಿಷಯ ತಿಳಿದ ಕೂಡಲೇ ರಾಸ್ತಾದ ಸಂಸ್ಥಾಪಕ ಪಾಲುದಾರ ಗೌಮ್ತೇಶ್ ಸಿಂಗ್ ಟ್ವಿಟರ್ ಮುಖಾಂತರ ಕ್ಷಮೆ ಕೋರಿ ಪೋಸ್ಟ್ ಮಾಡಿದ್ದಾರೆ. ಈ ರೀತಿಯ ವರ್ತನೆ ಇನ್ನೆಂದಿಗೂ ಪುನಾರವರ್ತನೆಯಾಗದಂತೆ ಎಚ್ಚರ ವಹಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.