
ಗಾರ್ಮೆಂಟ್ಸ್ ನೌಕರರ ಕನಿಷ್ಠ ವೇತನವನ್ನು ತಿಂಗಳಿಗೆ 28,200 ರೂಪಾಯಿ ನಿಗದಿಪಡಿಸಲು ಗಾರ್ಮೆಂಟ್ಸ್ ಅಂಡ್ ಟೆಕ್ಸ್ ಟೈಲ್ಸ್ ವರ್ಕರ್ಸ್ ಯೂನಿಯನ್ ಆಗ್ರಹಿಸಿದೆ. ಸೋಮವಾರದಂದು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಯೂನಿಯನ್ ಅಧ್ಯಕ್ಷೆ ಆರ್. ಪ್ರತಿಭಾ ಈ ಒತ್ತಾಯ ಮಾಡಿದ್ದಾರೆ.
ವೇತನ ಪರಿಷ್ಕರಣೆ ಕುರಿತಂತೆ ಹೈಕೋರ್ಟ್ ಆದೇಶವಿದ್ದರೂ ಸಹ ಗಾರ್ಮೆಂಟ್ಸ್ ಉದ್ಯಮಿಗಳ ಒತ್ತಡಕ್ಕೆ ಮಣಿದಿರುವ ಸರ್ಕಾರ, ವಿಳಂಬ ನೀತಿ ಅನುಸರಿಸುವ ಮೂಲಕ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಯಾವುದೇ ಒಂದು ವಲಯಕ್ಕೆ ಐದು ವರ್ಷಗಳಿಗೊಮ್ಮೆ ಕನಿಷ್ಠ ವೇತನ ಪರಿಷ್ಕರಣೆ ಮಾಡಬೇಕೆಂಬ ಕಾನೂನಿದ್ದು, ಆದರೆ ಗಾರ್ಮೆಂಟ್ಸ್ ನೌಕರರ ವಿಷಯದಲ್ಲಿ ಕಳೆದ 43 ವರ್ಷಗಳ ಇತಿಹಾಸದಲ್ಲಿ 9 ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಯೂನಿಯನ್ ಗೌರವ ಅಧ್ಯಕ್ಷೆ ಮೈತ್ರೇಯಿ, 2018ರ ಫೆಬ್ರವರಿಯಲ್ಲಿ ಹೆಲ್ಪರ್ ವರ್ಗಕ್ಕೆ ದಿನಕ್ಕೆ 445 ರೂಪಾಯಿ ವೇತನ ನಿಗದಿಪಡಿಸಿ ಸರ್ಕಾರ ಕರಡು ಆದೇಶ ಹೊರಡಿಸಿತ್ತಾದರೂ ಉದ್ಯಮಿಗಳ ಲಾಬಿಗೆ ಮಣಿದು ಕೇವಲ ಒಂದು ತಿಂಗಳಲ್ಲಿ ಅದನ್ನು ಹಿಂಪಡೆಯಲಾಗಿತ್ತು. ಇದನ್ನು ಪ್ರಶ್ನಿಸಿ ಕಾರ್ಮಿಕ ಸಂಘಟನೆಗಳು ಹೈಕೋರ್ಟ್ ಮೆಟ್ಟಿಲೇರಿದ್ದು, 2021 ರಲ್ಲಿ ಕಾರ್ಮಿಕರ ಪರ ತೀರ್ಪು ಬಂದರೂ ಸಹ ಇದನ್ನು ಈವರೆಗೆ ಅನುಷ್ಠಾನಗೊಳಿಸಿಲ್ಲ ಎಂದು ತಿಳಿಸಿದರು.