ಕೆಲವೊಮ್ಮೆ ಸಣ್ಣ ಗಾಯವಾದರೂ ವಿಪರೀತ ರಕ್ತ ಹೊರಚೆಲ್ಲಿ ಅವಾಂತರವಾಗುತ್ತದೆ. ಗಾಯ ದೊಡ್ಡದಾಗಿದ್ದರೆ ವೈದ್ಯರನ್ನೇ ಸಂಪರ್ಕಿಸುವುದು ಒಳ್ಳೆಯದು. ಸಣ್ಣ ಗಾಯವಾದರೆ ಈ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ.
ವಿಪರೀತ ರಕ್ತಸ್ರಾವವನ್ನು ನಿಯಂತ್ರಿಸಲು ಐಸ್ ಕ್ಯೂಬ್ ಗಳನ್ನು ಆ ಜಾಗಕ್ಕೆ ಒತ್ತಿಡಿ. ಬಟ್ಟೆಯಲ್ಲಿ ಐಸ್ ತುಂಡುಗಳನ್ನು ಕಟ್ಟಿ ರಕ್ತಸ್ರಾವ ಆಗುತ್ತಿರುವ ಜಾಗಕ್ಕೆ ಮೆದುವಾಗಿ ಮಸಾಜ್ ಮಾಡಿದರೆ ರಕ್ತ ನಿಧಾನಕ್ಕೆ ಹೆಪ್ಪುಗಟ್ಟುತ್ತದೆ.
ಕೈ ಅಥವಾ ಕಾಲಿನಲ್ಲಿ ಗಾಯವಾದರೆ ಆ ಜಾಗಕ್ಕೆ ತಕ್ಷಣ ಅರಶಿನದ ಪುಡಿ ಉದುರಿಸಿ. ಇದರಿಂದ ರಕ್ತಸ್ರಾವ ನಿಲ್ಲುವುದು ಮಾತ್ರವಲ್ಲ ಗಾಯ ಒಣಗಿದ ಬಳಿಕ ಆ ಜಾಗದ ಕಲೆಯೂ ಮಾಯವಾಗುತ್ತದೆ. ಆದರೆ ನೆನಪಿರಲಿ ರಾಸಾಯನಿಕ ಬೆರೆತ ಅರಶಿನ ಪುಡಿ ಬಳಸುವುದು ಒಳ್ಳೆಯದಲ್ಲ. ಅದರ ಬದಲು ಅರಶಿನ ಕೊಂಬನ್ನು ತೇದು ಹಚ್ಚಬಹುದು.
ಗಾಯ ಸಣ್ಣದಾಗಿದ್ದರೆ ಆ ಜಾಗವನ್ನು ನಿರಂತರ ಒಂದು ನಿಮಿಷದ ಹೊತ್ತು ಒತ್ತಿ ಹಿಡಿಯಿರಿ. ಇದರಿಂದಲೂ ರಕ್ತ ಹರಿಯುವುದು ಕಡಿಮೆಯಾಗುತ್ತದೆ. ಗೋಧಿ ಹಿಟ್ಟು ಅಥವಾ ಮೈದಾ ಹಿಟ್ಟಿಗೂ ರಕ್ತ ಸ್ರಾವವನ್ನು ನಿಯಂತ್ರಿಸುವ ಶಕ್ತಿ ಇದೆ. ಆದರೆ ನೆನಪಿರಲಿ ಗಾಯದ ಆಳ ತೀವ್ರವಾಗಿದ್ದರೆ ನೀವು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.