ಕಲೆಗೆ ವಯಸ್ಸಿನ ಹಂಗಿಲ್ಲ, ಬಡವ – ಶ್ರೀಮಂತ, ಮೇಲು -ಕೀಳು ಎಂಬ ಭಾವನೆ ಮೊದಲೇ ಇಲ್ಲ. ನೀವು ವೃತ್ತಿಪರವಾಗಿ ಯಾವುದೇ ಕ್ಷೇತ್ರದಲ್ಲಿದ್ದರೂ ಕೂಡ ನಿಮ್ಮೊಳಗೆ ಇರುವ ಕಲೆಯು ನಿಮ್ಮನ್ನು ಹೊಸದೊಂದು ಜಗತ್ತಿಗೆ ಪರಿಚಯ ಮಾಡಿಕೊಡುತ್ತದೆ. ಈ ವಿಚಾರಗಳನ್ನು ಇಲ್ಲಿ ಹೇಳೋಕೆ ಒಂದು ವಿಶೇಷ ಕಾರಣ ಕೂಡ ಇದೆ. ಈ ಯುವಕ ವೃತ್ತಿಯಲ್ಲಿ ಓರ್ವ ಟೆಕ್ಕಿ. ಆದರೆ ಸಂಗೀತ ಕ್ಷೇತ್ರದ ಮೇಲಿನ ಇವರ ಆಸಕ್ತಿ ಕುತೂಹಲಕಾರಿಯಾಗಿದೆ.
ಇವರ ಹೆಸರು ಪ್ರಜ್ವಲ್ ಎಸ್.ಎಂ. ಮೂಲತಃ ಶಿವಮೊಗ್ಗದವರಾದ ಮಂಜುನಾಥ್ ಎಸ್ ಹಾಗೂ ಜಯಾ ದಂಪತಿಯ ಪುತ್ರನಾದ ಈ ಯುವಕ ಪ್ರಾಥಮಿಕ ಶಿಕ್ಷಣವನ್ನು ಓದಿದ್ದು ಸೊರಬ ತಾಲೂಕಿನ ಆನವಟ್ಟಿಯಲ್ಲಿ. ಬಳಿಕ ಪ್ರೌಢ ಶಿಕ್ಷಣ, ಪಿಯುಸಿ ವಿದ್ಯಾಭ್ಯಾಸವನ್ನು ಸಾಗರ ಹಾಗೂ ಮೈಸೂರಿನಲ್ಲಿ ಮುಗಿಸಿ ಮೈಸೂರಿನಲ್ಲಿಯೇ ಇಂಜಿನಿಯರಿಂಗ್ ಪದವಿಯನ್ನೂ ಪಡೆದರು.
ಬಾಲ್ಯದಿಂದಲೂ ಸಂಗೀತದ ಕಡೆಗೆ ಆಸಕ್ತಿಯನ್ನು ಹೊಂದಿದ್ದ ಪ್ರಜ್ವಲ್ ತಬಲಾ ಕ್ಷೇತ್ರ ಹಾಗೂ ಗಾಯನ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರ ತಾತ ಶಾಂತಪ್ಪ ಕೂಡಾ ಬಯಲಾಟ, ತಬಲಾ ಕುರಿತು ಆಸಕ್ತಿ ಹೊಂದಿದ್ದರು. ಇದೀಗ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುವ ಪುತ್ರನ ಹಂಬಲಕ್ಕೆ ಕಂದಾಯ ಇಲಾಖೆಯಲ್ಲಿ ಸರ್ವೇಯರ್ ಆಗಿ ಮಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ತಂದೆ ಮಂಜುನಾಥ್ ಹಾಗೂ ತಾಯಿ ಜಯಾ ಬೆನ್ನೆಲುಬಾಗಿ ನಿಂತಿದ್ದಾರೆ.
ಅನಿವಾಸಿ ಭಾರತೀಯರಾಗಿರುವ ಪ್ರಜ್ವಲ್ ಚಿಕ್ಕಪ್ಪ ನಾಗರಾಜ್ ಹಾಗೂ ಚಿಕ್ಕಮ್ಮ ವಿನೋದಾ ಕೂಡ ಇವರ ಕಲಾ ಕ್ಷೇತ್ರದ ಬಗೆಗಿನ ಆಸಕ್ತಿಗೆ ನೀರೆರೆಯುತ್ತಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ನನ್ನಿಂದ ಏನಾದರೊಂದು ಕೊಡುಗೆ ನೀಡಬೇಕು ಎಂದು ನಿರ್ಧರಿಸಿರುವ ಪ್ರಜ್ವಲ್ ಒಂದು ಆಲ್ಬಂ ಗೀತೆಗೆ ಧ್ವನಿಯಾಗಿದ್ದಾರೆ. ಪ್ರಜ್ವಲ್ ಕಂಠಸಿರಿಯಲ್ಲಿ ಮೂಡಿ ಬಂದಿರುವ ʼನೀನೇ ನೀನೇʼ ಎಂಬ ಆಲ್ಬಂ ಸಾಂಗ್ನ ಟೀಸರ್ ಇದೀಗ ಬಿಡುಗಡೆಯಾಗಿದ್ದು, ಯುಟ್ಯೂಬ್ನಲ್ಲಿ ಎಲ್ಲರ ಗಮನ ಸೆಳೆದಿದೆ. ಶೀಘ್ರದಲ್ಲಿಯೇ ಆಲ್ಬಂ ಸಾಂಗ್ ರಿಲೀಸ್ ಆಗಲಿದೆ ಎಂದು ಹೇಳಲಾಗಿದ್ದು, ಅಂದ ಹಾಗೇ ಈ ಗೀತೆ ರಚನೆ ಹಾಗೂ ಸಂಗೀತ ನಿರ್ದೇಶನ ಮಾಡಿರುವವರು ತಿಮ್ಮೇಗೌಡ ಎಂ.ಜೆ. ಇವರು ನಾದಬ್ರಹ್ಮ ಹಂಸಲೇಖಾ ಅವರ ಶಿಷ್ಯ ಎಂಬುದು ಗಮನಾರ್ಹ ಸಂಗತಿಯಾಗಿದೆ.