ಲಿವ್ ಹಾರ್ಲೆಂಡ್ ಎಂಬ ಬೀದಿಬದಿಯಲ್ಲಿನ ಗಾಯಕಿ ಎಂದಿನಂತೆ ಗಾಯನದಲ್ಲಿ ಮಗ್ನರಾಗಿದ್ದರು. ಅದೊಂದು ಬಹಳ ಜನಸಂದಣಿ ಇದ್ದಂತಹ ರಸ್ತೆಯಾಗಿತ್ತು. ಯಾರಿಗೂ ಕೂಡ ಪಕ್ಕದಲ್ಲಿ ಏನು ನಡೆಯುತ್ತಿದೆ ಎಂದು ತಿರುಗಿ ನೋಡಲು ಕೂಡ ಆಗದಷ್ಟು ಬ್ಯುಸಿಯಾಗಿ ನಡೆದುಕೊಂಡು ಹೋಗುತ್ತಿದ್ದರು. ಹಾಗಿದ್ದು ಕೆಲವರು ಗಾಯಕಿಯ ಸುಶ್ರಾವ್ಯ ಗೀತೆ ಕಡೆಗೆ ಗಮನಹರಿಸಿದ್ದರು.
ಈ ನಡುವೆ ಗಾಯಕಿ ಪಕ್ಕದಲ್ಲಿದ್ದ ಕಸದ ಡಬ್ಬಿಯಿಂದ ಶಬ್ದ ಕೇಳಿಸಲು ಆರಂಭವಾಯಿತು. ಆಕೆ ಕೂಡ ಧ್ವನಿಯನ್ನು ತಗ್ಗಿಸುತ್ತಾ, ಹಾಡು ಗುನುಗುತ್ತಲೇ ಕಸದ ಡಬ್ಬಿಯ ಕಡೆಗೆ ತಿರುಗಿ ನೋಡಿದಳು. ಅಲ್ಲೊಬ್ಬ ವ್ಯಕ್ತಿ, ಡಬ್ಬದೊಳಗೆ ಪೂರ್ಣವಾಗಿ ಇಣುಕಿಕೊಂಡು ಆಹಾರಕ್ಕಾಗಿ ಹುಡುಕಾಡುತ್ತಿದ್ದ. ಅದು ಕೂಡ ಚಿಕನ್ ತುಂಡು ಏನಾದರೂ ಎಸೆಯಲಾಗಿದೆಯೇ? ಅದು ಯಾರಾದರೂ ಹೊಟ್ಟೆ ತುಂಬಿ ಸಾಕೆಂದು ಎಸೆದಿದ್ದಾರೆಯೇ? ಎಂದು ಆತ ತಡಕಾಡುತ್ತಿದ್ದ. ಹಸಿವಿನಿಂದ ಕಂಗಾಲಾಗಿದ್ದ ನಿರ್ಗತಿಕ ಆತ ಎಂದು ಗಾಯಕಿ ಹಾರ್ಲೆಂಡ್‌ಗೆ ಕೆಲವೇ ಕ್ಷ ಣಗಳಲ್ಲಿ ತಿಳಿದುಹೋಯಿತು.
ತಾನೇ ಹಾಡು ಹೇಳಿ ರಸ್ತೆ ಬದಿಯಲ್ಲಿ ಓಡಾಡುವ ಜನರಿಂದ ನಾಲ್ಕು ಕಾಸು ಸಂಪಾದಿಸಲು ನೋಡುತ್ತಿರುವ ಗಾಯಕಿ ಹಾರ್ಲೆಂಡ್, ಕರುಣೆಯ ಸಾಕಾರ ಮೂರ್ತಿ ಆದಳು. ತನ್ನಲ್ಲಿದ್ದ ಆ ದಿನದ ಅಷ್ಟೂ ಹಣವನ್ನು ಎತ್ತಿಕೊಂಡು ನಿರ್ಗತಿಕನಿಗೆ ನೀಡಿದಳು. ಒಳ್ಳೆಯ ಹೋಟೆಲ್ ಹೋಗಿ, ಹೊಟ್ಟೆ ತುಂಬ ಚಿಕನ್ ತಿನ್ನುವಂತೆ ಕೈಹಿಡಿದು ಸಮಾಧಾನ ಮಾಡುತ್ತಾ ತಿಳಿಸಿದಳು.
ಪಾಪ, ನಿರ್ಗತಿಕನಿಗೆ ಹಸಿವಿನ ನಡುವೆಯೂ ಆನಂದಭಾಷ್ಪ ತಡೆಯಲಾಗಲಿಲ್ಲ. ದೇವರು ತನ್ನ ಹಸಿವು ನೀಗಿಸಲು ಹಾರ್ಲೆಂಡ್ ರೂಪದಲ್ಲಿ ಬಂದಿದ್ದಾನೆ ಎಂದುಕೊಂಡ ಆತ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಲಿವ್ ಹಾರ್ಲೆಂಡ್ ಹಂಚಿಕೊಂಡಿದ್ದಾರೆ. ಮಾನವೀಯತೆ ಜೀವಂತವಾಗಿರವುದಕ್ಕೆ ಈ ಘಟನೆಯೇ ಪಕ್ಕಾ ಉದಾಹರಣೆ, ಕರುಣೆಯ ಕಡಲು ಮನುಷ್ಯನ ಎದೆಯಾಳದಲ್ಲಿದೆ ಎಂದು ಲಕ್ಷ ಗಟ್ಟಲೆ ನೆಟ್ಟಿಗರು ಸಂತೋಷದಿಂದ ಪ್ರತಿಕ್ರಿಯಿಸಿದ್ದಾರೆ.
https://youtu.be/pFu_olijWgE