alex Certify ಗಾಜಾ ಪಟ್ಟಿಯಲ್ಲಿ ಕಾದಾಡುತ್ತಿರೋ ಇಸ್ರೇಲ್-ಹಮಾಸ್ ಪಡೆಗಳು ಪಾಲಿಸಲೇಬೇಕು ಯುದ್ಧದ ಈ ನಿಯಮ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾಜಾ ಪಟ್ಟಿಯಲ್ಲಿ ಕಾದಾಡುತ್ತಿರೋ ಇಸ್ರೇಲ್-ಹಮಾಸ್ ಪಡೆಗಳು ಪಾಲಿಸಲೇಬೇಕು ಯುದ್ಧದ ಈ ನಿಯಮ….!

ಇಸ್ರೇಲ್ ಮತ್ತು ಹಮಾಸ್ ನಡುವೆ ಭೀಕರ ಯುದ್ಧ ಮುಂದುವರೆದಿದೆ. ಮೊದಲಿಗೆ ಹಮಾಸ್, ಇಸ್ರೇಲ್ ಮೇಲೆ ಮನಬಂದಂತೆ ರಾಕೆಟ್ ಹಾರಿಸಿತ್ತು. ಇದಾದ ನಂತರ ಇಸ್ರೇಲ್ ಕೂಡ ಹಮಾಸ್‌ಗೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಹಮಾಸ್ ಅನ್ನು ಸಂಪೂರ್ಣ ನಿರ್ನಾಮ ಮಾಡುವುದಾಗಿ ಪಣತೊಟ್ಟಿದೆ.

ಆದರೆ ಇಸ್ರೇಲ್ ಎಷ್ಟೇ ಉಗ್ರ ದಾಳಿ ಮಾಡಿದರೂ ಯುದ್ಧದ ನಿಯಮಗಳನ್ನು ಪಾಲಿಸಬೇಕಾಗುತ್ತದೆ. 1864 ರಲ್ಲಿ ಈ ಯುದ್ಧದ ನಿಯಮಗಳು ಜಾರಿಗೆ ಬಂದಿವೆ. ಯುದ್ಧದ ಸಮಯದಲ್ಲಿ ಉಭಯ ಪಡೆಗಳು ಏನು ಮಾಡಬಹುದು ಮತ್ತು ಏನು ಮಾಡಬಾರದು ಎಂಬುದನ್ನು ನೋಡೋಣ.

ಪ್ರಪಂಚದ ಎಲ್ಲಾ ದೇಶಗಳು ಜಂಟಿಯಾಗಿ ಯುದ್ಧದ ನಿಯಮಗಳನ್ನು ರೂಪಿಸಿವೆ. ಇವುಗಳನ್ನು ಅಂತರರಾಷ್ಟ್ರೀಯ ಮಾನವೀಯ ಕಾನೂನು (IHL) ಎಂದು ಕರೆಯಲಾಗುತ್ತದೆ. ಯುದ್ಧದ ಸಮಯದಲ್ಲಿ ದೇಶಗಳು ಪರಸ್ಪರರ ವಿರುದ್ಧ ಏನು ಮಾಡಬಹುದು ಮತ್ತು ಮಾಡಬಾರದು ಎಂಬುದನ್ನು ಈ ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ.

ರೆಡ್‌ಕ್ರಾಸ್‌ನ ಸಂಸ್ಥಾಪಕ ಹೆನ್ರಿ ಡ್ಯೂನಾಂಟ್‌ ನೇತೃತ್ವದಲ್ಲಿ 1864ರಲ್ಲಿ ಮೊದಲ ಬಾರಿಗೆ ಜಿನೀವಾ ಒಪ್ಪಂದದಲ್ಲಿ ಯುದ್ಧದ ನಿಯಮಗಳನ್ನು ಜಾರಿ ಮಾಡಲು ಅಭಿಯಾನವನ್ನು ಪ್ರಾರಂಭಿಸಲಾಯಿತು. ಆಗ ಕೇವಲ 12 ದೇಶಗಳು ಇದಕ್ಕೆ ಒಪ್ಪಿಗೆ ನೀಡಿದ್ದವು, ಆದ್ರೀಗ 196 ದೇಶಗಳು ಸಹಿ ಹಾಕಿವೆ.

ಯುದ್ಧದ ನಿಯಮಗಳು…

ನಿಯಮಗಳ ಪ್ರಕಾರ ಯುದ್ಧದ ಸಮಯದಲ್ಲಿ ಯಾವುದೇ ದೇಶವು ಮತ್ತೊಂದು ದೇಶದ ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡುವಂತಿಲ್ಲ. ಇದಲ್ಲದೆ ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು ಮತ್ತು ಯುದ್ಧದಲ್ಲಿ ಭಾಗವಹಿಸದ ಜನರಿಗೆ ಹಾನಿ ಮಾಡಬಾರದು. ಎಲ್ಲೋ ಸಂಘರ್ಷದಲ್ಲಿ ಸಿಕ್ಕಿಹಾಕಿಕೊಂಡರೂ ಸುರಕ್ಷಿತವಾಗಿ ಪಾರಾಗಲು ಅವಕಾಶ ಕಲ್ಪಿಸಲಾಗುತ್ತದೆ.

ಯುದ್ಧದಲ್ಲಿ ಸೆರೆಹಿಡಿಯಲಾದ ಕೈದಿಗಳನ್ನು ಗೌರವದಿಂದ ನಡೆಸಿಕೊಳ್ಳಬೇಕು. ಅವರಿಗೆ ಹಿಂಸೆ ಕೊಡುವಂತಿಲ್ಲ. ವಶಪಡಿಸಿಕೊಂಡ ಶತ್ರು ಸೈನಿಕರಿಗೆ ಆಹಾರ ಮತ್ತು ನೀರನ್ನು ಸಹ ಕೊಡಬೇಕು. ಇದಲ್ಲದೆ ವೈದ್ಯಕೀಯ ಕಾರ್ಯಕರ್ತರು, ಗಾಯಗೊಂಡಿರುವ ಶತ್ರು ದೇಶದ ಸೈನಿಕನಿಗೂ ಚಿಕಿತ್ಸೆ ನೀಡಬೇಕು. ಜನರು ಮತ್ತು ಮನೆಗಳನ್ನು ಟಾರ್ಗೆಟ್‌ ಮಾಡಬಾರದು.

ಯುದ್ಧದ ಸಮಯದಲ್ಲಿ ಶತ್ರು ದೇಶದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವಂತಿಲ್ಲ. ಯಾವುದೇ ಸೈನಿಕರು ಈ ರೀತಿ ಮಾಡುತ್ತಿರುವುದು ಕಂಡುಬಂದರೆ ಅದನ್ನು ಯುದ್ಧ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಆ ದೇಶದ ವಿರುದ್ಧ ಕ್ರಮ ಕೈಗೊಳ್ಳಬಹುದು.

ಯುದ್ಧದಲ್ಲಿ ರಾಸಾಯನಿಕ ಮತ್ತು ಜೈವಿಕ ಅಸ್ತ್ರಗಳ ಬಳಕೆಯನ್ನು ನಿಷೇಧಿಸಲಾಗಿದೆ. ಇದನ್ನು ಅಕ್ರಮ ಎಂದು ಕರೆಯಲಾಗುತ್ತದೆ. ಯಾವುದೇ ದೇಶವು ಈ ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಬಳಸಿದರೆ ಅದನ್ನು ಯುದ್ಧ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಅಂತಹ ದೇಶದ ವಿರುದ್ಧ ಇತರ ದೇಶಗಳು ಕ್ರಮ ಕೈಗೊಳ್ಳಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...