ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ ಎಲ್ಲಾ ಕ್ಷೇತ್ರದಲ್ಲೂ ಬೆಸ್ಟ್ ಎನಿಸಿಕೊಂಡಿದ್ದಾರೆ. ಕ್ರಿಕೆಟ್‌ನಲ್ಲಿ ಬೆಸ್ಟ್ ಫಿನಿಶರ್ ಆಗಿದ್ದ ಧೋನಿ ಈಗ ಅತ್ಯುತ್ತಮ ಉದ್ಯಮಿಯಾಗಿ ಬದಲಾಗಿರೋದು ವಿಶೇಷ. ಇದಕ್ಕೆ ಸಾಕ್ಷಿ ವರ್ಷದಿಂದ ವರ್ಷಕ್ಕೆ ಏರ್ತಾ ಇರೋ ಧೋನಿ ಗಳಿಕೆ. ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ನಂತರ ವ್ಯಾಪಾರ ಜಗತ್ತಿನಲ್ಲಿ ಯಶಸ್ಸಿನ ಹೊಸ ಮೆಟ್ಟಿಲು ಏರುತ್ತಿದ್ದಾರೆ. ಉದ್ಯಮದ ವಿಸ್ತರಣೆಯೊಂದಿಗೆ ಅವರ ವೈಯಕ್ತಿಕ ಆದಾಯ ನಿರಂತರವಾಗಿ ಹೆಚ್ಚುತ್ತಿದೆ. ಇದಕ್ಕೆ ಸಾಕ್ಷಿ ಆದಾಯ ತೆರಿಗೆ ಇಲಾಖೆಯ ಕಡತ.
ದೊಡ್ಡ ದೊಡ್ಡ ಉದ್ಯಮಿಗಳು, ಸಿರಿವಂತರು ತೆರಿಗೆ ವಂಚನೆ ಮಾಡ್ತಾ ಇದ್ರೆ, ಧೋನಿ ಮಾತ್ರ ಮುಂಗಡವಾಗಿಯೇ ಟ್ಯಾಕ್ಸ್ ಪಾವತಿ ಮಾಡಿಬಿಟ್ಟಿದ್ದಾರೆ. ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಅಂದರೆ ಏಪ್ರಿಲ್ ನಿಂದ ಅಕ್ಟೋಬರ್ 2022ರವರೆಗೆ ಆದಾಯ ತೆರಿಗೆ ಇಲಾಖೆಗೆ ಮುಂಗಡವಾಗಿ 17 ಕೋಟಿ ರೂಪಾಯಿಯನ್ನು ಮಾಹಿ ಪಾವತಿ ಮಾಡಿದ್ದಾರೆ. ಕಳೆದ ವರ್ಷ ಧೋನಿ ಇದೇ ರೀತಿ 13 ಕೋಟಿ ರೂಪಾಯಿ ಪಾವತಿಸಿದ್ದರು. ಈ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಧೋನಿ ಆದಾಯದಲ್ಲಿ ಶೇ.30ರಷ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಲಾಗುತ್ತಿದೆ.2021-22 ನೇ ಸಾಲಿನಲ್ಲಿ ಧೋನಿ ಆದಾಯ ತೆರಿಗೆ ಇಲಾಖೆಗೆ 38 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದರು. ಈ ವರ್ಷ ಅವರ ಒಟ್ಟು ಆದಾಯ ಸುಮಾರು 130 ಕೋಟಿ.
ಇದಕ್ಕೂ ಮುನ್ನ ಅಂದರೆ 2020-21ನೇ ಸಾಲಿನಲ್ಲಿ ಅವರು ಸುಮಾರು 30 ಕೋಟಿ ತೆರಿಗೆ ಪಾವತಿಸಿದ್ದರು. ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟಾಗಿನಿಂದಲೂ ನಿರಂತರವಾಗಿ ಜಾರ್ಖಂಡ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಅತಿದೊಡ್ಡ ಆದಾಯ ತೆರಿಗೆ ಪಾವತಿದಾರ ಎನಿಸಿಕೊಂಡಿದ್ದಾರೆ. 2020ರ ಆಗಸ್ಟ್ 15ರಂದು ಧೋನಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಐಪಿಎಲ್ ಜೊತೆಗೆ ಈಗಲೂ ನಂಟು ಹೊಂದಿದ್ದಾರೆ. ಭಾರತದ ಮಾಜಿ ನಾಯಕ ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ.
ಸ್ಪೋರ್ಟ್ಸ್ ವೇರ್, ಹೋಮ್ ಇಂಟೀರಿಯರ್ ಕಂಪನಿ ಹೋಮ್‌ಲೇನ್, ಕಾರ್ಸ್ 24, ಖಾತಾಬುಕ್, ಬೈಕ್ ರೇಸಿಂಗ್ ಕಂಪನಿ, ಸ್ಪೋರ್ಟ್ಸ್ ಕಂಪನಿ ರನ್ ಆಡಮ್, ಕ್ರಿಕೆಟ್ ಕೋಚಿಂಗ್ ಮತ್ತು ಸಾವಯವ ಕೃಷಿಯಲ್ಲೂ ಮಾಹಿ ತೊಡಗಿಕೊಂಡಿದ್ದಾರೆ. ರಾಂಚಿಯಲ್ಲಿ ಸುಮಾರು 43 ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ. ಧೋನಿ ಮತ್ತು ಅವರ ಪತ್ನಿ ಚಿತ್ರ ನಿರ್ಮಾಣ ಸಂಸ್ಥೆಯನ್ನೂ ಸ್ಥಾಪಿಸಿದ್ದಾರೆ. ಈ ವರ್ಷ ಬೆಂಗಳೂರಿನಲ್ಲಿ ಎಂಎಸ್ ಧೋನಿ ಗ್ಲೋಬಲ್ ಸ್ಕೂಲ್ ಕೂಡ ಆರಂಭವಾಗಿದೆ.