ಸಿಂಗಲ್ ಆಗಿರುವವರು ನನಗೂ ಗರ್ಲ್‌ಫ್ರೆಂಡ್ ಅಥವಾ ಬಾಯ್‌ಫ್ರೆಂಡ್ ಇದ್ದರೆ ಚೆನ್ನಾಗಿರುತ್ತಿತ್ತು ಎಂದುಕೊಳ್ತಾರೆ. ಸಂಗಾತಿ ಇಲ್ಲದವರಿಗೆ ಮಾತ್ರ ಒಂಟಿತನದ ನೋವು ಅರ್ಥವಾಗುತ್ತದೆ.
ಪ್ರಿಯತಮೆಗಾಗಿ ಪ್ರಿಯಕರ ಭಿನ್ನ ವಿಭಿನ್ನ ಸಾಹಸಗಳು, ತ್ಯಾಗ ಮಾಡಿರೋದನ್ನು ನೀವು ಕೇಳಿರಬಹುದು. ಚೀನಾದಲ್ಲೊಬ್ಬ ತನಗೂ ಪ್ರಿಯತಮೆ ಬೇಕೆಂಬ ಆಸೆ ಪೂರೈಸಲು 2000 ಕಿಮೀ ಪ್ರಯಾಣಿಸಿದ್ದಾನೆ.
ಬುದ್ಧನ ಪ್ರತಿಮೆ ಮುಂದೆ ಕುಳಿತು ತನ್ನಾಸೆಯನ್ನು ಕೂಡ ಹೇಳಿಕೊಂಡಿದ್ದಾನೆ. ಬೇಗ ನನಗೂ ಒಬ್ಬಳು ಗೆಳತಿ ಸಿಗುವಂತೆ ಮಾಡು ಎಂದು ಕೇಳಿಕೊಂಡಿದ್ದಾನೆ. ಇದರ ಹೊರತಾಗಿ ಕೋಟ್ಯಾಧಿಪತಿಯಾಗಬೇಕೆಂಬ ತನ್ನ ಬಯಕೆಯನ್ನು ಬುದ್ಧನ ಮುಂದಿಟ್ಟಿದ್ದಾನೆ. ಕಾರು ಮತ್ತು ಮನೆ ಕೂಡ ಸಿಗುವಂತೆ ಮಾಡು ಎಂದು ಪ್ರಾರ್ಥಿಸಿದ್ದಾನೆ.
ಈ ವೀಡಿಯೊವನ್ನು ಚೀನಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಡೌಯಿನ್‌ನಲ್ಲಿ ಜಾಂಗ್ ಎಂಬ ವ್ಯಕ್ತಿ ಹಂಚಿಕೊಂಡಿದ್ದಾನೆ. ಯುವಕ ಚೀನಾದ ಝೆಜಿಯಾಂಗ್ ಪ್ರಾಂತ್ಯದಿಂದ 2000 ಕಿಲೋಮೀಟರ್ ದೂರ ಪ್ರಯಾಣಿಸಿದ ನಂತರ ಸಿಚುವಾನ್ ಪ್ರಾಂತ್ಯದ ಬೌದ್ಧ ದೇವಾಲಯವಾದ ಲೆಶನ್ ಜೈಂಟ್ ಬುದ್ಧಕ್ಕೆ ಬಂದಿದ್ದ. ಇಲ್ಲಿ ಭಗವಾನ್ ಬುದ್ಧನ ಬೃಹತ್ ವಿಗ್ರಹವಿದೆ. ಇದನ್ನು ನೂರಾರು ವರ್ಷಗಳ ಹಿಂದೆ ಟ್ಯಾಂಗ್ ರಾಜವಂಶದವರು ನಿರ್ಮಿಸಿದರು.
ಈ ವ್ಯಕ್ತಿ 71 ಮೀಟರ್ ಉದ್ದದ ಈ ಬುದ್ಧನ ಪ್ರತಿಮೆಯ ಮುಂದೆ ಪ್ರಾರ್ಥನೆ ಸಲ್ಲಿಸಿದ್ದಾನೆ. ದೇವರ ಮೂರ್ತಿಯ ಕಿವಿಯ ಬಳಿ ದೊಡ್ಡ ಗಾತ್ರದ ಏರ್‌ಪಾಡ್‌ನಂತಹ ಸ್ಪೀಕರ್ ಇಟ್ಟು ಬುದ್ಧನಿಗೆ ತನ್ನ ಸಂದೇಶವನ್ನು ತಿಳಿಸಿದ್ದಾನೆ. ಇದರಿಂದ ಬುದ್ಧನಿಗೆ ತನ್ನ ಮಾತು ಸರಿಯಾಗಿ ಕೇಳಿಸುತ್ತೆ ಅನ್ನೋದು ಯುವಕನ ಅಭಿಪ್ರಾಯ.
ನನಗೆ 27 ವರ್ಷ, ನನ್ನ ಬಳಿ ಕಾರು ಇಲ್ಲ, ಗರ್ಲ್‌ಫ್ರೆಂಡ್ ಕೂಡ ನನಗಿಲ್ಲ. ನಾನು ಮೊದಲು ಶ್ರೀಮಂತನಾಗಲು ಬಯಸುತ್ತೇನೆ. ನನಗೆ ಬೇಕಾಗಿರುವುದು 10 ಮಿಲಿಯನ್ ಯುವಾನ್, ಅಂದರೆ 12 ಕೋಟಿ ರೂಪಾಯಿ. ನನಗೂ ಒಬ್ಬ ಗೆಳತಿ ಬೇಕು, ಹಣದ ಬದಲು ನನ್ನನ್ನು ಪ್ರೀತಿಸುವ ಸುಂದರಿ ಎಂದು ಆತ ಕೇಳಿಕೊಂಡಿದ್ದಾನೆ. ದೋಷವನ್ನು ಹೋಗಲಾಡಿಸಲು ಯುವಕ ಬುದ್ಧನ ದೇವಾಲಯಕ್ಕೆ ಬಂದಿದ್ದಾನಂತೆ. ದೋಷ ಪರಿಹಾರವಾದರೆ ತನಗೆ ಹಣದ ಜೊತೆಗೆ ಗರ್ಲ್‌ಫ್ರೆಂಡ್ ಕೂಡ ಸಿಗಬಹುದು ಅನ್ನೋದು ಈತನ ನಂಬಿಕೆ. ಯುವಕನ ಈ ಸಾಹಸ ಚೀನಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.