ಗರ್ಭಿಣಿಯರು ತಮ್ಮ ಆರೋಗ್ಯ ಮತ್ತು ಆಹಾರದ ಬಗ್ಗೆ ವಿಶೇಷ ಗಮನಹರಿಸಬೇಕು. ಯಾವೆಲ್ಲಾ ಪದಾರ್ಥಗಳನ್ನು ತಿನ್ನಬಹುದು? ಯಾವುದನ್ನು ತಿನ್ನಬಾರದು ಎಂಬ ಬಗ್ಗೆ ಗರ್ಭಿಣಿಯರು ಕಾಳಜಿ ವಹಿಸಲೇಬೇಕು. ಅಂದಹಾಗೆ ಮೊಟ್ಟೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಗರ್ಭಾವಸ್ಥೆಯಲ್ಲಿ ಮಹಿಳೆಯರನ್ನು ಇದನ್ನು ತಿನ್ನಬಹುದಾ? ಇದು ಸುರಕ್ಷಿತವೇ ಎಂಬ ಪ್ರಶ್ನೆ ಸಹಜ. ಗರ್ಭಿಣಿಯರಿಗೆ ಅನೇಕ ಆಹಾರ ಪದಾರ್ಥಗಳಿಂದ ದೂರವಿರುವಂತೆ ವೈದ್ಯರು ಸೂಚಿಸುತ್ತಾರೆ. ಅವುಗಳಲ್ಲಿ ಪ್ರಮುಖವಾದದ್ದೆಂದರೆ ಕಚ್ಚಾ ಮತ್ತು ಕಡಿಮೆ ಬೇಯಿಸಿದ ಪದಾರ್ಥಗಳು. ಅವುಗಳಲ್ಲಿ ಬ್ಯಾಕ್ಟೀರಿಯಾಗಳಿರುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಈ ಬ್ಯಾಕ್ಟೀರಿಯಾಗಳು ಗರ್ಭಿಣಿಯರಿಗೆ ಮತ್ತು ಹುಟ್ಟಲಿರುವ ಮಗುವಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ಗರ್ಭಿಣಿಯರು ಹಸಿ ಮೊಟ್ಟೆಗಳನ್ನು ತಿನ್ನಬಾರದು. ಮೊಟ್ಟೆಗಳು ಸಾಲ್ಮೊನೆಲ್ಲಾ ಕಾಯಿಲೆಗೆ ಕಾರಣವಾಗುತ್ತವೆ. ಗರ್ಭಾವಸ್ಥೆಯಲ್ಲಿ ಮೊಟ್ಟೆಗಳಿಂದ ಮಾಡಿದ ಮೇಯೋನೀಸ್ ಸೇವಿಸುವಂತಿಲ್ಲ. ತಜ್ಞರ ಪ್ರಕಾರ, ಗರ್ಭಿಣಿಯರು ಹಸಿ ಅಥವಾ ಬೇಯಿಸದ ಮೊಟ್ಟೆಗಳಿಂದ ಮಾಡಿದ ತಿನಿಸುಗಳನ್ನು ಸೇವಿಸಬಾರದು. ಅರೆಬೆಂದ ಮೊಟ್ಟೆಗಳನ್ನು ಕೂಡ ತಿನ್ನುವಂತಿಲ್ಲ. ಮೊಟ್ಟೆಯನ್ನು ಸುಮಾರು 10 ರಿಂದ 12 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಬೇಕು.
ಆಮ್ಲೆಟ್ ಅಥವಾ ಇತರ ತಿನಿಸುಗಳನ್ನು ಮಾಡುವಾಗಲೂ ಅದನ್ನು 2 ರಿಂದ 3 ನಿಮಿಷಗಳ ಕಾಲ ಎರಡೂ ಬದಿಗಳಿಂದ ಬೇಯಿಸಬೇಕು. ಮೊಟ್ಟೆಗಳನ್ನು ಖರೀದಿಸುವಾಗ ಅದರ ಮೇಲೆ “ಪಾಶ್ಚರೀಕರಿಸಿದೆ” ಎಂದು ಬರೆದಿದೆಯೇ ಎಂಬುದನ್ನು ಕೂಡ ಪರಿಶೀಲಿಸಿ. ಗರ್ಭಾವಸ್ಥೆಯಲ್ಲಿ ಮೊಟ್ಟೆಗಳನ್ನು ತಿನ್ನುವುದರಿಂದ ಮಹಿಳೆಯರಿಗೆ ಅನೇಕ ರೀತಿಯಲ್ಲಿ ಪ್ರಯೋಜನವಿದೆ. ಮೊಟ್ಟೆಯಲ್ಲಿ ಸಾಕಷ್ಟು ಪ್ರಮಾಣದ ಕೊಬ್ಬು ಮತ್ತು ಪ್ರೋಟೀನ್ ಇರುತ್ತದೆ. ಈ ಕಾರಣದಿಂದಾಗಿ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ. ಇದರಿಂದ ಗರ್ಭಾವಸ್ಥೆಯ ಸಕ್ಕರೆ ಕಾಯಿಲೆ ಅಪಾಯವನ್ನು ಕಡಿಮೆ ಮಾಡಬಹುದು.
ಮಗುವಿಗೆ ಮೊಟ್ಟೆ ಎಷ್ಟು ಪ್ರಯೋಜನಕಾರಿ?
ಮೊಟ್ಟೆಯ ಪೋಷಕಾಂಶಗಳು ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ಕಂಡುಬರುವ ವಿಟಮಿನ್ ಬಿ 12 ಮತ್ತು ಕೋಲೀನ್ ಆರೋಗ್ಯಕರ ಮೆದುಳಿನ ಬೆಳವಣಿಗೆಗೆ ಸಹಕರಿಸುತ್ತದೆ. ಹಾಗಾಗಿ ಗರ್ಭಿಣಿಯರು ಮೊಟ್ಟೆಯನ್ನು ಸೇವನೆ ಮಾಡಬಹುದು. ಆದರೆ ಮೊಟ್ಟೆ ತಿನ್ನುವ ಮುನ್ನ ಈ ಸಲಹೆಗಳನ್ನು ತಪ್ಪದೇ ಪಾಲಿಸಿ.