ಬಿಸಿಲಿನಲ್ಲಿ ಹೇರಳವಾಗಿ ಸಿಗುವ ವಿಟಮಿನ್ ಡಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶ. ಅದರಲ್ಲೂ ಗರ್ಭಿಣಿಯರು ವಿಟಮಿನ್ ಡಿ ಸಾಕಷ್ಟು ಪ್ರಮಾಣದಲ್ಲಿ ಸೇವಿಸಿದರೆ ಮಗುವಿನ ಐಕ್ಯೂ ಮಟ್ಟ ಚೆನ್ನಾಗಿರುತ್ತದೆ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ.
ಶೇ. 46ರಷ್ಟು ಗರ್ಭಿಣಿಯರಲ್ಲಿ ವಿಟಮಿನ್ ಡಿ ಕೊರತೆ ಕಂಡು ಬಂದಿತ್ತು. ಮಾತ್ರೆಗಳ ಹೊರತಾಗಿ ಕೆಲವು ನೈಸರ್ಗಿಕ ಆಹಾರಗಳನ್ನು ಸೇವಿಸುವ ಮೂಲಕವೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಮೀನು ಮೊಟ್ಟೆ ಮತ್ತು ದನದ ಹಾಲಿನಲ್ಲಿ ವಿಟಮಿನ್ ಡಿ ಪ್ರಮಾಣ ಹೇರಳವಾಗಿದೆ. ಮೊಳಕೆ ಬರಿಸಿದ ಧಾನ್ಯಗಳ ಸೇವನೆಯಿಂದಲೂ ವಿಟಮಿನ್ ಡಿ ಕೊರತೆಯನ್ನು ಸರಿದೂಗಿಸಬಹುದು. ಮೊಟ್ಟೆಯ ಹಳದಿ ಭಾಗದಲ್ಲಿ ವಿಟಮಿನ್ ಹಾಗೂ ಖನಿಜಾಂಶಗಳು ಹೇರಳವಾಗಿದೆ.
ಗರ್ಭಿಣಿಯರು ಸೇವಿಸಿದ ವಿಟಮಿನ್ ಡಿ ನೇರವಾಗಿ ಭ್ರೂಣವನ್ನು ಸೇರುತ್ತದೆ. ವಿಟಮಿನ್ ಕೊರತೆ ಮಗುವಿನಲ್ಲಿ ಗಂಭೀರ ಸಮಸ್ಯೆಯನ್ನು ಹುಟ್ಟಿಹಾಕಬಹುದು. ಮೂಳೆಗಳು ಸರಿಯಾಗಿ ಬೆಳವಣಿಗೆ ಕಾಣದಿರಬಹುದು. ಹಾಗಾಗಿ ಗರ್ಭಿಣಿಯರು ಸರಿಯಾದ ಪ್ರಮಾಣದಲ್ಲಿ ವಿಟಮಿನ್ ಡಿ ಸೇವನೆ ಮಾಡುವುದು ಬಹಳ ಮುಖ್ಯ.