
ಅನೇಕ ಸಂಪ್ರದಾಯಗಳು ಮತ್ತು ನಂಬಿಕೆಗಳು ಸನಾತನ ಹಿಂದೂ ಧರ್ಮದೊಂದಿಗೆ ಸಂಬಂಧ ಹೊಂದಿವೆ. ಹಾವುಗಳು ಗರ್ಭಿಣಿಯನ್ನು ಕಚ್ಚುವುದಿಲ್ಲ ಎನ್ನುವ ನಂಬಿಕೆ ಮೊದಲಿನಿಂದಲೂ ಬೆಳೆದು ಬಂದಿದೆ. ಗರ್ಭಿಣಿಯನ್ನು ನೋಡಿದ ನಂತರ ಹಾವು ಕುರುಡಾಗುತ್ತದೆ ಎಂದು ಹೇಳಲಾಗುತ್ತದೆ. ಹಾವುಗಳು ಗರ್ಭಿಣಿಯ ಹತ್ತಿರಕ್ಕೂ ಸುಳಿಯುವುದಿಲ್ಲವಂತೆ. ಇದನ್ನು ಕೇಳಿದ್ರೆ ಅಚ್ಚರಿಯಾಗುತ್ತದೆ. ಇದರ ಹಿಂದಿನ ಕಾರಣವೇನು ಅನ್ನೋದನ್ನು ಬ್ರಹ್ಮವೈವರ್ತ ಪುರಾಣದಲ್ಲಿ ವಿವರಿಸಲಾಗಿದೆ.
ಪ್ರಕೃತಿಯು ಹಾವಿಗೆ ಕೆಲವು ವಿಶೇಷ ಇಂದ್ರಿಯಗಳನ್ನು ಒದಗಿಸಿದೆ. ಇದರಿಂದಾಗಿ ಮಹಿಳೆ ಗರ್ಭಿಣಿಯಾಗಿರೋದನ್ನು ಅವು ಸುಲಭವಾಗಿ ಪತ್ತೆ ಮಾಡುತ್ತವಂತೆ. ಆದರೆ ಗರ್ಭಿಣಿ ಮಹಿಳೆಯನ್ನು ಗುರುತಿಸಿದ ನಂತರ ಹಾವುಗಳು ಏಕೆ ಕಚ್ಚುವುದಿಲ್ಲ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಬ್ರಹ್ಮವೈವರ್ತ ಪುರಾಣದಲ್ಲಿ ಈ ಬಗ್ಗೆ ಕಥೆಯೇ ಇದೆ. ಒಮ್ಮೆ ಗರ್ಭಿಣಿಯೊಬ್ಬಳು ಶಿವನನ್ನು ಕುರಿತು ತಪಸ್ಸು ಮಾಡುತ್ತಿದ್ದಳು. ಅವಳು ಸಂಪೂರ್ಣವಾಗಿ ತಪಸ್ಸಿನಲ್ಲಿ ಮುಳುಗಿದ್ದಳು. ಎರಡು ಹಾವುಗಳು ಗರ್ಭಿಣಿಗೆ ತೊಂದರೆ ನೀಡಲಾರಂಭಿಸಿದವು.
ಈ ಕಾರಣದಿಂದಾಗಿ ಆಕೆಯ ಗಮನವು ವಿಚಲಿತವಾಯಿತು. ತಪಸ್ಸನ್ನು ಭಂಗ ಮಾಡಿದ್ದರಿಂದ ಆಕೆಯ ಹೊಟ್ಟೆಯಲ್ಲಿದ್ದ ಮಗು ಹಾವುಗಳಿಗೆ ಶಾಪ ನೀಡಿತಂತೆ. ಇನ್ಮುಂದೆ ಹಾವುಗಳು ಗರ್ಭಿಣಿಯ ಬಳಿ ಹೋದರೆ ಕುರುಡಾಗಲಿ ಎಂದು ಇಡೀ ನಾಗವಂಶಕ್ಕೆ ಶಾಪ ನೀಡಿತು. ಈ ಘಟನೆಯ ನಂತರ, ಹಾವುಗಳು ಗರ್ಭಿಣಿಯನ್ನು ನೋಡಿದ ನಂತರ ಕುರುಡಾಗುತ್ತವೆ ಮತ್ತು ಅವಳನ್ನು ಕಚ್ಚುವುದಿಲ್ಲ ಎಂಬ ನಂಬಿಕೆ ಜನಪ್ರಿಯವಾಯಿತು. ಗರ್ಭಿಣಿಗೆ ಹಾವಿನ ಕನಸು ಕೂಡ ಬರುವುದಿಲ್ಲ ಎಂಬ ನಂಬಿಕೆಯೂ ಇದೆ.
ಗರ್ಭಿಣಿಗೆ ಹಾವು ಕಚ್ಚದಿರಲು ವೈಜ್ಞಾನಿಕ ಕಾರಣಗಳು
ಗರ್ಭಿಣಿಯನ್ನು ಹಾವು ಕಚ್ಚದೆ ಇರುವುದರ ಹಿಂದೆ ಧಾರ್ಮಿಕ ನಂಬಿಕೆ ಮಾತ್ರವಲ್ಲದೆ ವೈಜ್ಞಾನಿಕ ಕಾರಣವೂ ಇದೆ. ಗರ್ಭಧರಿಸಿದ ಬಳಿಕ ಮಹಿಳೆಯ ದೇಹದಲ್ಲಿ ಕೆಲವು ಅಂಶಗಳು ರೂಪುಗೊಳ್ಳುತ್ತವೆ, ಅನೇಕ ಬದಲಾವಣೆಗಳಾಗುತ್ತವೆ. ಇದರಲ್ಲಿ ಪ್ರಮುಖವಾದ ಅಂಶವೆಂದರೆ ಹಾರ್ಮೋನುಗಳ ಸ್ರವಿಸುವಿಕೆ. ಅದಕ್ಕಾಗಿಯೇ ಗರ್ಭಾವಸ್ಥೆಯಲ್ಲಿ ಮಹಿಳೆಯ ಸ್ವಭಾವ, ಆಸಕ್ತಿ ಮತ್ತು ಬಣ್ಣ ಇತ್ಯಾದಿಗಳಲ್ಲಿ ಬದಲಾವಣೆ ಕಂಡುಬರುತ್ತದೆ. ಬಹುಶಃ ಮಹಿಳೆಯ ದೇಹದಲ್ಲಿ ಈ ಹಾರ್ಮೋನ್ ಬದಲಾದ ಬಗ್ಗೆ ಹಾವು ತಿಳಿದುಕೊಂಡಿರಬಹುದು ಮತ್ತು ಆಕೆಯ ಹತ್ತಿರ ಹೋಗದೆ ತನ್ನ ಮಾರ್ಗವನ್ನು ಬದಲಾಯಿಸಿರಬಹುದು ಎಂದು ವಿಜ್ಞಾನಿಗಳು ನಂಬುತ್ತಾರೆ.
ಆದಾಗ್ಯೂ ಇದು ಸಂಪೂರ್ಣವಾಗಿ ದೃಢೀಕರಿಸಲ್ಪಟ್ಟಿಲ್ಲ. ಯಾವುದೇ ಕಾರಣಕ್ಕೂ ಹಾವನ್ನು ಕೊಲ್ಲಬಾರದು. ಅದರಲ್ಲೂ ವಿಶೇಷವಾಗಿ ಗರ್ಭಿಣಿಯರು ಹಾವುಗಳನ್ನು ಕೊಲ್ಲುವಂತಿಲ್ಲ. ಹಾವನ್ನು ಕೊಲ್ಲುವುದು ಮಹಾಪಾಪ, ಹಲವಾರು ಜನ್ಮಗಳವರೆಗೆ ಅದರ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಗರ್ಭಾವಸ್ಥೆಯಲ್ಲಿ ಹಾವುಗಳ ಬಳಿ ಹೋಗದೇ ಇರುವುದು ಉತ್ತಮ.