ಬಿಸಿ ಬಿಸಿ ಚಹಾದ ಜತೆ ಗರಿ ಗರಿಯಾದ ಕೋಡುಬಳೆ ಇದ್ದರೆ ಯಾರು ಬೇಡ ಎನ್ನುತ್ತಾರೆ ಹೇಳಿ. ಆದರೆ ಕೆಲವೊಮ್ಮೆ ಈ ಕೋಡುಬಳೆ ಹದ ಸರಿಯಾಗದೇ ಇದ್ದರೆ ಮೆತ್ತಗೆ ಆಗಿ ರುಚಿಯೇ ಹೋಗಿಬಿಡುತ್ತದೆ. ಹಾಗೇ ಇದನ್ನು ಮಾಡುವುದಕ್ಕೆ ರಗಳೆ ಕೆಲಸ ಎಂದು ಕೆಲವರು ಮಾಡುವುದೇ ಇಲ್ಲ. ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು:
ಅಕ್ಕಿ ಹಿಟ್ಟು – 1 ಕಪ್, ಹೆಸರುಬೇಳೆ – 1 ಟೇಬಲ್ ಸ್ಪೂನ್, ನೀರು – 1 ಕಪ್, ಎಣ್ಣೆ – 1 ½ ಟೇಬಲ್ ಸ್ಪೂನ್, ಖಾರದ ಪುಡಿ – 1/2 ಟೀ ಸ್ಪೂನ್, ಜೀರಿಗೆ – 1/2 ಟೀ ಸ್ಪೂನ್, ಓಂ ಕಾಳು – 1/2 ಟೀ ಸ್ಪೂನ್, ಇಂಗು – ಚಿಟಿಕೆ, ಉಪ್ಪು – ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ.
ಮಾಡುವ ವಿಧಾನ:
ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು ಒಂದು ಗಂಟೆಗಳ ಕಾಲ ನೆನೆಸಿ ನಂತರ ನೀರನ್ನೆಲ್ಲಾ ಬಸಿದು ಇಟ್ಟುಕೊಳ್ಳಿ. ನಂತರ ಒಂದು ಪಾತ್ರೆಗೆ ಒಂದು ಕಪ್ ನೀರು ಹಾಕಿ ಅದು ಬಿಸಿಯಾಗುತ್ತಲೆ ಅದಕ್ಕೆ ಹೆಸರುಬೇಳೆ ಹಾಕಿ ನಂತರ ಖಾರದ ಪುಡಿ, ಉಪ್ಪು, ಜೀರಿಗೆ, ಓಂಕಾಳು, ಇಂಗು, ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ನೀರು ಕುದಿಯಲು ಆರಂಭಿಸುತ್ತಿದ್ದಂತೆ ಅದಕ್ಕೆ ಸ್ವಲ್ಪ ಸ್ವಲ್ಪವೇ ಅಕ್ಕಿಹಿಟ್ಟು ಸೇರಿಸಿ ಗ್ಯಾಸ್ ಆಫ್ ಮಾಡಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಒಂದು ಮುಚ್ಚಳ ಮುಚ್ಚಿ 10 ನಿಮಿಷಗಳ ಕಾಲ ಹಾಗೆಯೇ ಇಡಿ. 10 ನಿಮಿಷಗಳ ಬಳಿಕ 1 ½ ಟೇಬಲ್ ಸ್ಪೂನ್ ನಷ್ಟು ಬಿಸಿ ಎಣ್ಣೆ ಹಾಕಿ ಮೆತ್ತಗಾಗುವವರೆಗೆ ನಾದಿಕೊಳ್ಳಿ. ಇದರಿಂದ ಚಿಕ್ಕ ಚಿಕ್ಕ ಉಂಡೆ ಕಟ್ಟಿಕೊಂಡು ಅದನ್ನು ಉದ್ದಕೆ ನಾದಿಕೊಂಡು ವೃತ್ತಾಕಾರವಾಗಿ ಮಾಡಿ. ಕೋಡುಬಳೆ ಆಕಾರಕ್ಕಿರಲಿ. ಕಾದ ಎಣ್ಣೆಯಲ್ಲಿ ಇದನ್ನು ಎರಡೂ ಕಡೆ ಚೆನ್ನಾಗಿ ಬೇಯಿಸಿಕೊಂಡರೆ ಕೋಡುಬಳೆ ಸಿದ್ಧ.