ಊಟಕ್ಕೆ ಸೈಡ್ ಡಿಶ್, ಇಲ್ಲ ಸಂಜೆಯ ವೇಳೆಗೆ ಸ್ನ್ಯಾಕ್ಸ್ ಗೆ ಈ ಆಲೂಗಡ್ಡೆ ಫ್ರೈ ಮಾಡಿಕೊಂಡು ಸವಿಯಬಹುದು. ಮಕ್ಕಳಿಗೂ ಸಖತ್ ಇಷ್ಟವಾಗುತ್ತದೆ ಇದು. ಮನೆಯಲ್ಲಿ ಒಮ್ಮೆ ಪ್ರಯತ್ನಿಸಿ.
3 ಆಲೂಗಡ್ಡೆ ತೆಗೆದುಕೊಳ್ಳಿ. ಅದನ್ನು ಹದ ಗಾತ್ರದ ಹೋಳುಗಳಾಗಿ ಕತ್ತರಿಸಿಕೊಳ್ಳಿ. ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 3 ಕಪ್ ನೀರು, 1 ಟೀ ಸ್ಪೂನ್ ಉಪ್ಪು ಹಾಕಿ. ನೀರು ಕುದಿ ಬರುತ್ತಿದ್ದಂತೆ ಆಲೂಗಡ್ಡೆ ಹೋಳುಗಳನ್ನು ಹಾಕಿ ಬೇಯಿಸಿಕೊಳ್ಳಿ.
ಆಲೂಗಡ್ಡೆ ಹದವಾಗಿ ಬೆಂದರೆ ಸಾಕು. ಒಂದು ಪ್ಯಾನ್ ಗೆ 4 ಟೇಬಲ್ ಸ್ಪೂನ್ ಎಣ್ಣೆ ಹಾಕಿಕೊಳ್ಳಿ. ನಂತರ ಅದಕ್ಕೆ ½ ಸಣ್ಣಗೆ ಹೆಚ್ಚಿಟ್ಟುಕೊಂಡ ಕೊತ್ತಂಬರಿ ಸೊಪ್ಪು, 3 ಬೆಳ್ಳುಳ್ಳಿ ಎಸಳು ಸಣ್ಣಗೆ ಹೆಚ್ಚಿಟ್ಟುಕೊಂಡಿದ್ದನ್ನು ಸೇರಿಸಿ ಹದ ಉರಿಯಲ್ಲಿ 3 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.
ನಂತರ ಈ ಮಿಶ್ರಣವನ್ನು ಶೋಧಿಸಿಕೊಳ್ಳಿ. ಬೆಳ್ಳುಳ್ಳಿ ಕೊತ್ತಂಬರಿ ಸೊಪ್ಪಿನ ಮಿಶ್ರಣವನ್ನು ಬೇರೆ ತಟ್ಟೆಗೆ ತೆಗೆದಿಟ್ಟುಕೊಳ್ಳಿ. ಹಾಗೇ ಎಣ್ಣೆಯನ್ನು ಒಂದು ದೊಡ್ಡ ಬೌಲ್ ಗೆ ಹಾಕಿಕೊಳ್ಳಿ. ನಂತರ ಬೇಯಿಸಿಟ್ಟುಕೊಂಡ ಆಲೂಗಡ್ಡೆಯ ನೀರನ್ನು ಬಸಿದುಕೊಳ್ಳಿ.
ಈ ಆಲೂಗಡ್ಡೆ ಹೋಳುಗಳನ್ನು ಬೌಲ್ ನಲ್ಲಿರುವ ಎಣ್ಣೆಗೆ ಸೇರಿಸಿಕೊಳ್ಳಿ. ಅದಕ್ಕೆ ಸ್ವಲ್ಪ ಉಪ್ಪು, ಕಾಳುಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು ಒವನ್ ನಲ್ಲಿ 30 ನಿಮಿಷಗಳ ಕಾಲ ಬೇಕ್ ಮಾಡಿಕೊಳ್ಳಿ. ನಂತರ ಇದಕ್ಕೆ ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪಿನ ಮಿಶ್ರಣ ಸೇರಿಸಿ ಸರ್ವ್ ಮಾಡಿ.