ಕೆಲವೊಮ್ಮೆ ಬೆಳಗ್ಗೆ ತಿಂಡಿಗೆ ಮಾಡಿದ ಇಡ್ಲಿ ಹಾಗೇ ಉಳಿದುಬಿಡುತ್ತೆ. ತಣ್ಣಗಾದ ಮೇಲೆ ಆ ಇಡ್ಲಿಯನ್ನು ತಿನ್ನಲು ಯಾರೂ ಇಷ್ಟಪಡೋದಿಲ್ಲ. ಹಾಗಂತ ಅದನ್ನು ಬಿಸಾಡೋಕೆ ಯಾರಿಗೆ ಮನಸ್ಸು ಬರುತ್ತೆ ಹೇಳಿ? ಇಡ್ಲಿ ಉಳಿದರೆ ಇನ್ಮೇಲೆ ಬಿಸಾಡ್ಬೇಡಿ, ಗರಿಗರಿಯಾದ ಪಕೋಡಾ ಮಾಡಿ.
ಬೇಕಾಗುವ ಸಾಮಗ್ರಿ : 5 ಇಡ್ಲಿ, ಅರ್ಧ ಕಪ್ ಮೈದಾ ಹಿಟ್ಟು, ಕಾಲು ಕಪ್ ಕಾರ್ನ್ ಫ್ಲೋರ್, ರುಚಿಗೆ ತಕ್ಕಷ್ಟು ಉಪ್ಪು, ಒಂದು ಚಮಚ ಕೆಂಪು ಮೆಣಸಿನ ಪುಡಿ, ಕಾಲು ಚಮಚ ಕಾಳುಮೆಣಸಿನ ಪುಡಿ, ಒಂದು ಚಮಚ ಸೋಯಾ ಸಾಸ್, ಅಗತ್ಯಕ್ಕೆ ತಕ್ಕಷ್ಟು ನೀರು, ಕರಿಯಲು ಎಣ್ಣೆ.
ಮಾಡುವ ವಿಧಾನ : ಪ್ರತಿ ಇಡ್ಲಿಯನ್ನು ನಾಲ್ಕು ಪೀಸ್ ಗಳಾಗಿ ಕತ್ತರಿಸಿ ಇಟ್ಟುಕೊಳ್ಳಿ. ಒಂದು ದೊಡ್ಡ ಬೌಲ್ ನಲ್ಲಿ ಮೈದಾ, ಕಾರ್ನ್ ಫ್ಲೋರ್, ಉಪ್ಪು, ಕೆಂಪು ಮೆಣಸಿನ ಪುಡಿ, ಕಾಳುಮೆಣಸಿನ ಪುಡಿ, ಸೋಯಾ ಸಾಸ್ ಹಾಕಿ ಮಿಕ್ಸ್ ಮಾಡಿ. ಅದಕ್ಕೆ ಸ್ವಲ್ಪ ನೀರು ಹಾಕಿ ಹದವಾದ ಹಿಟ್ಟನ್ನು ತಯಾರಿಸಿ. ಇಡ್ಲಿಯ ಪೀಸ್ ಅನ್ನು ಈ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಕರಿಯಿರಿ. ಅದು ತೆಳುವಾದ ಹೊಂಬಣ್ಣಕ್ಕೆ ಬರುವವರೆಗೆ, ಗರಿಗರಿಯಾಗುವವರೆಗೆ ಕರಿಯಿರಿ. ಬಾಣಲೆಯಿಂದ ತೆಗೆದು ಕಿಚನ್ ಪೇಪರ್ ಟವಲ್ ನಲ್ಲಿ ಹಾಕಿ ಹೆಚ್ಚುವರಿ ಎಣ್ಣೆಯನ್ನು ಹೊರಹಾಕಿ. ಗರಿಗರಿ ಇಡ್ಲಿ ಪಕೋಡಾವನ್ನು ಬಿಸಿಬಿಸಿಯಾಗಿ ಸರ್ವ್ ಮಾಡಿ.