ಬಿಸಿಲಿನ ಧಗೆ ಜೊತೆಗೆ ಕರ್ನಾಟಕ ವಿಧಾನಸಭಾ ಚುನಾವಣೆಯ ಅಬ್ಬರವೂ ದಿನೇ ದಿನೇ ಜೋರಾಗ ತೊಡಗಿದ್ದು, ಬಿಜೆಪಿ ಅಭ್ಯರ್ಥಿಗಳ ಪರ ಈಗಾಗಲೇ ಪ್ರಚಾರದ ಅಖಾಡಕ್ಕೆ ಧುಮುಕಿರುವ ಪ್ರಧಾನಿ ನರೇಂದ್ರ ಮೋದಿಯವರು ಗುರುವಾರದಂದು 50 ಲಕ್ಷ ಕಾರ್ಯಕರ್ತರ ಜೊತೆ ನೇರವಾಗಿ ಸಂವಾದ ನಡೆಸಿದ್ದಾರೆ.
ಏಪ್ರಿಲ್ 30 ರಂದು ಕರ್ನಾಟಕಕ್ಕೆ ಆಗಮಿಸಲಿರುವ ನರೇಂದ್ರ ಮೋದಿಯವರು ಚನ್ನಪಟ್ಟಣದಲ್ಲಿ ಬೃಹತ್ ರ್ಯಾಲಿಯನ್ನು ನಡೆಸಲಿದ್ದು, ಈ ಹಿನ್ನಲೆಯಲ್ಲಿ ಅಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆವರೆಗೆ ಚನ್ನಪಟ್ಟಣ – ಮದ್ದೂರು ನಡುವಿನ ಹೆದ್ದಾರಿಯಲ್ಲಿ ಸಾರ್ವಜನಿಕ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಭದ್ರತಾ ದೃಷ್ಟಿಯಿಂದ ಹಾಗೂ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗಲಿರುವ ಕಾರಣಕ್ಕಾಗಿ ಎಕ್ಸ್ ಪ್ರೆಸ್ ಹೈವೇ ಬಂದ್ ಮಾಡಲಾಗುತ್ತಿದ್ದು, ಬೆಂಗಳೂರಿಂದ ಮೈಸೂರಿಗೆ ಹಾಗೂ ಮೈಸೂರಿನಿಂದ ಬೆಂಗಳೂರಿಗೆ ಹೊರಡುವ ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
ಬೆಂಗಳೂರಿಂದ ಮೈಸೂರಿಗೆ ಹೊರಡುವ ವಾಹನಗಳು ಬಿಡದಿ – ಹಾರೋಹಳ್ಳಿ – ಕನಕಪುರ – ಮಳವಳ್ಳಿ ಮಾರ್ಗವಾಗಿ ಮೈಸೂರಿಗೆ ಪ್ರಯಾಣಿಸಬಹುದಾಗಿದ್ದು, ಹಾಗೆಯೇ ಮೈಸೂರಿನಿಂದ ಬೆಂಗಳೂರಿಗೆ ಹೋಗುವ ವಾಹನಗಳು ಮದ್ದೂರು – ಕುಣಿಗಲ್ – ನೆಲಮಂಗಲ ಮಾರ್ಗವಾಗಿ ಬೆಂಗಳೂರು ತಲುಪಬಹುದಾಗಿದೆ. ಅಲ್ಲದೆ ಮೈಸೂರಿನಿಂದ ಬೆಂಗಳೂರಿಗೆ ಮತ್ತೊಂದು ಮಾರ್ಗವೂ ಇದ್ದು ಮಳವಳ್ಳಿ – ಕನಕಪುರ – ಹಾರೋಹಳ್ಳಿ ಮಾರ್ಗವಾಗಿಯೂ ತಲುಪಬಹುದಾಗಿದೆ.