ಬಹುತೇಕರಿಗೆ ಸರ್ಕಾರಿ ರಜಾ ಸಿಕ್ಕರೆ ತಕ್ಷಣವೇ ಪ್ರವಾಸಿ ತಾಣಗಳತ್ತ ಧಾವಿಸುವುದು ವಾಡಿಕೆ. ಮತದಾನದಂತಹ ಮಹತ್ವದ ಸಂದರ್ಭಗಳಲ್ಲೂ ಅದನ್ನು ಮರೆತು ಪ್ರವಾಸಿ ತಾಣಗಳಿಗೆ ಲಗ್ಗೆ ಇಡುತ್ತಾರೆ. ಹೀಗಾಗಿಯೇ ಮತದಾನ ಹೆಚ್ಚಿಸಲು ಕೇಂದ್ರ ಚುನಾವಣಾ ಆಯೋಗ ವಾರದ ಮಧ್ಯದಲ್ಲಿ ಈ ಬಾರಿ ಮತದಾನಕ್ಕೆ ದಿನ ನಿಗದಿ ಮಾಡಿದೆ ಮೇ 10 ರ ಬುಧವಾರದಂದು ಮತದಾನ ನಡೆಯಲಿದೆ.
ಇಷ್ಟಾದರೂ ಕೂಡ ಕೆಲವು ಮತದಾರರು ತಮ್ಮ ಹಕ್ಕನ್ನು ಚಲಾಯಿಸದೆ ಪ್ರವಾಸಕ್ಕೆ ತೆರಳುತ್ತಾರೆ. ಈ ಕಾರಣಕ್ಕಾಗಿಯೇ ಕೊಡಗು ಜಿಲ್ಲೆಯ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರು ಮೇ 10 ರಂದು ಮತದಾನ ಮಾಡದವರಿಗೆ ತಂಗಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೆ ಮತದಾನ ಮಾಡಿ ಬಂದವರಿಗೆ ರಿಯಾಯಿತಿಯನ್ನೂ ಸಹ ನೀಡುವುದಾಗಿ ತಿಳಿಸಿದ್ದಾರೆ.
ಇದರ ಮಧ್ಯೆ ಶಿವಮೊಗ್ಗ ಜಿಲ್ಲಾಡಳಿತ ಮಹತ್ವದ ತೀರ್ಮಾನ ಒಂದನ್ನು ಕೈಗೊಂಡಿದ್ದು, ರಾಜ್ಯ ವಿಧಾನಸಭಾ ಚುನಾವಣೆ ನಡೆಯುವ ಮೇ 10 ರಂದು ವಿಶ್ವ ಪ್ರಸಿದ್ಧ ಜೋಗ ಜಲಪಾತ ವೀಕ್ಷಣೆಗೆ ನಿರ್ಬಂಧ ವಿಧಿಸಿದೆ. ಕಡ್ಡಾಯವಾಗಿ ಮತದಾನ ಮಾಡಲು ಅನುಕೂಲವಾಗಬೇಕೆಂಬ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ಅಂದು ಬೆಳಗ್ಗೆ 6 ರಿಂದ ಸಂಜೆ 7 ರ ವರೆಗೆ ಪ್ರವಾಸಿಗರಿಗೆ ಜಲಪಾತ ವೀಕ್ಷಣೆಗೆ ಅವಕಾಶವಿರುವುದಿಲ್ಲ.