ರಾಜ್ಯದಲ್ಲಿ ಕೆಲವು ದಿನಗಳಿಂದ ಪಠ್ಯ ಪರಿಷ್ಕರಣೆ ಕುರಿತ ಅಪಸ್ವರಗಳು ಕೇಳಿ ಬರುತ್ತಿದ್ದು, ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಹಲವು ಮಹನೀಯರ ಪಠ್ಯಗಳನ್ನು ಕೈ ಬಿಡುವುದರ ಅಥವಾ ಸಂಕ್ಷಿಪ್ತಗೊಳಿಸುವುದರ ಮೂಲಕ ಅಪಚಾರವೆಸಗಲಾಗಿದೆ ಎಂದು ಹೇಳಲಾಗುತ್ತಿದೆ.
ಹೀಗಾಗಿ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಮಾಡಿರುವ ಪಠ್ಯ ಪರಿಷ್ಕರಣೆಯನ್ನು ಹಿಂಪಡೆದು ಈ ಹಿಂದಿನ ಬರಗೂರು ರಾಮಚಂದ್ರಪ್ಪನವರ ಸಮಿತಿ ಮಾಡಿರುವ ಪಠ್ಯ ಪರಿಷ್ಕರಣೆಯನ್ನೇ ಮುಂದುವರಿಸಬೇಕೆಂದು ಒತ್ತಾಯಿಸಿ ಜೂನ್ 18ರಂದು ಪ್ರತಿಭಟನೆ ನಡೆಸಲಾಗುತ್ತಿದ್ದು, ಇದರಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಸಹ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಇದರ ಮಧ್ಯೆ ಬರಗೂರು ರಾಮಚಂದ್ರಪ್ಪನವರ ಸಮಿತಿ ಸಹ ಪಠ್ಯ ಪರಿಷ್ಕರಣೆ ವೇಳೆ ಹಲವು ಪ್ರಮಾದಗಳನ್ನು ಮಾಡಿದೆ ಎಂಬ ಮಾತುಗಳು ಮತ್ತೊಂದು ವಲಯದಿಂದ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ, ಹಿಂದಿನ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಹಾಗೂ ಅದಕ್ಕೂ ಹಿಂದಿನ ಡಾ. ಮುಡಂಬಡಿತ್ತಾಯ ನೇತೃತ್ವದ ಸಮಿತಿ ಮಾಡಿರುವ ಪರಿಷ್ಕೃತ ಪಠ್ಯ ಪುಸ್ತಕಗಳನ್ನು ಸಾರ್ವಜನಿಕರಿಗಾಗಿ ತೆರೆದಿಟ್ಟಿದೆ.
ಶಿಕ್ಷಣ ಇಲಾಖೆಯ ಕರ್ನಾಟಕ ರಾಜ್ಯ ಪಠ್ಯಪುಸ್ತಕ ಸಂಘದ ವೆಬ್ ಸೈಟ್ https://ktbs.kar.nic.in ನಲ್ಲಿ ಇವುಗಳು ಲಭ್ಯವಿದ್ದು, ಆದರೆ ಸದ್ಯಕ್ಕೆ ಆಕ್ಷೇಪಣೆ ಸಲ್ಲಿಸುವ ಕುರಿತು ಯಾವುದೇ ಅವಕಾಶ ನೀಡಲಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಇದಕ್ಕೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.