ಪ್ರಜಾಪ್ರಭುತ್ವ ವ್ಯವಸ್ಥೆಯ ಅತಿ ದೊಡ್ಡ ಹಬ್ಬ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಬೆಳಗ್ಗೆ 7:00 ಗಂಟೆಯಿಂದ ಸಂಜೆ 6:00 ಗಂಟೆವರೆಗೆ ಮತದಾನ ನಡೆಯಲಿದ್ದು, ಇದಕ್ಕಾಗಿ ಚುನಾವಣಾ ಈಗಾಗಲೇ ಸಕಲಸಿದ್ಧತೆ ಮಾಡಿಕೊಂಡಿದೆ.
ಈ ಬಾರಿಯ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿ ಕೊಡಲಾಗಿದ್ದು, ಇದು ಕೂಡ ಸುಸೂತ್ರವಾಗಿ ನೆರವೇರಿದೆ. ಇದರ ಜೊತೆಗೆ ನಾಳಿನ ಮತದಾನಕ್ಕೂ ಸೂಕ್ತ ವ್ಯವಸ್ಥೆ ಮಾಡಲಾಗಿದೆ.
ಮತದಾನಕ್ಕೆ ಬರಲು ಸಾಧ್ಯವೇ ಇಲ್ಲ ಎಂಬ ಹಿರಿಯ, ವಿಶೇಷ ಚೇತನ ಮತದಾರರಿಗೆ ಆಯಾ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಅಥವಾ ಗ್ರಾಮ ಪಂಚಾಯಿತಿಗಳ ಮೂಲಕ ವಾಹನ ವ್ಯವಸ್ಥೆ ಮಾಡಲು ಸೂಚಿಸಲಾಗಿದ್ದು, ಅಭ್ಯರ್ಥಿಗಳು ವಾಹನ ವ್ಯವಸ್ಥೆ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ.
ಅಲ್ಲದೆ ಮತದಾನ ಕೇಂದ್ರಕ್ಕೆ 200 ಮೀಟರ್ ಬಳಿಕ ಅಭ್ಯರ್ಥಿಗಳಿಗೆ ಒಂದು ಟೇಬಲ್, ಎರಡು ಕುರ್ಚಿ ಹಾಗೂ 3X5 ಚದರ ಅಡಿಯ ಬ್ಯಾನರ್ ಅಳವಡಿಸಲು ಅವಕಾಶವಿದ್ದು, ಅಲ್ಲಿ ಯಾವುದೇ ಕರಪತ್ರ ನೀಡುವಂತಿಲ್ಲ ಎಂದು ತಿಳಿಸಲಾಗಿದೆ.