ಕೇಂದ್ರ ಸರ್ಕಾರದ ಬೆಂಬಲ ಬೆಲೆಯಡಿ ಭತ್ತ ಖರೀದಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಕುರಿತಂತೆ ಮಂಗಳವಾರದಂದು ಆದೇಶ ಹೊರಡಿಸಲಾಗಿದೆ. ಡಿಸೆಂಬರ್ 15ರಿಂದ ರೈತರ ನೋಂದಣಿ ಕಾರ್ಯ ಆರಂಭವಾಗಲಿದ್ದು, ಜನವರಿ 1ರಿಂದ ಮಾರ್ಚ್ 31ರವರೆಗೆ ಭತ್ತ ಖರೀದಿ ಪ್ರಕ್ರಿಯೆ ನಡೆಯಲಿದೆ.
ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್ ಗೆ 2040 ರೂಪಾಯಿ ನಿಗದಿಪಡಿಸಲಾಗಿದ್ದರೆ, ಎ ಗ್ರೇಡ್ ಭತ್ತಕ್ಕೆ 2060 ರೂಪಾಯಿ ನಿಗದಿಪಡಿಸಲಾಗಿದೆ. ಒಟ್ಟು ಐದು ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಖರೀದಿಗಾಗಿ ಮೂರು ಏಜೆನ್ಸಿಗಳನ್ನು ಗುರುತಿಸಲಾಗಿದೆ.
ಪ್ರತಿ ಎಕರೆಗೆ 25 ಕ್ವಿಂಟಾಲ್ ನಂತೆ ಓರ್ವ ಬೆಳೆಗಾರರಿಂದ ಗರಿಷ್ಠ 40 ಕ್ವಿಂಟಾಲ್ ಭತ್ತ ಖರೀದಿಸಲಿದ್ದು, ಡಿಸೆಂಬರ್ 15ರಿಂದ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಆದರೆ ತಿಂಗಳ ಹಿಂದಷ್ಟೇ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಬೆಳೆಗಾರರಿಗೆ ಭತ್ತ ಖರೀದಿ ವೇಳೆ ಪ್ರತಿ ಕ್ವಿಂಟಾಲ್ ಗೆ 500 ರೂಪಾಯಿ ಪ್ರೋತ್ಸಾಹ ಧನ ನೀಡಿದ್ದು, ಆದರೆ ಇತರೆ ಜಿಲ್ಲೆಗಳ ರೈತರಿಗೆ ಇದನ್ನು ನೀಡದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.