ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ (PM Cares for Children Scheme ) ಯೋಜನೆಯನ್ನು ಫೆಬ್ರವರಿ 28ರವರೆಗೆ ವಿಸ್ತರಿಸಿದೆ. ಈ ಹಿಂದೆ ಈ ಯೋಜನೆಯನ್ನು 2021ರ ಡಿಸೆಂಬರ್ 31ರವರೆಗೆ ಮಾತ್ರ ಮಾನ್ಯ ಮಾಡಲಾಗಿತ್ತು.
ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಯು ಮಕ್ಕಳಿಗೆ ಆರ್ಥಿಕ ನೆರವನ್ನು ನೀಡುತ್ತದೆ. ಕೊರೊನಾ ಸಾಂಕ್ರಾಮಿಕದಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಶಿಕ್ಷಣ, ಆರೋಗ್ಯದ ಭದ್ರತೆ ಹಾಗೂ 18 ವರ್ಷ ತುಂಬಿದವರಿಗೆ ಮಾಸಿಕ ಸ್ಟೈಪಂಡ್ ಮತ್ತು 23 ವರ್ಷ ಮೇಲ್ಪಟ್ಟವರಿಗೆ 10 ಲಕ್ಷ ರೂಪಾಯಿಗಳ ಒಟ್ಟು ಮೊತ್ತವನ್ನು ನೀಡುತ್ತದೆ.
ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಹರಿರುವ ಎಲ್ಲಾ ಮಕ್ಕಳು ಇದೇ ಬರುವ 28ನೇ ತಾರೀಖಿನ ಒಳಗಾಗಿ ಈ ಯೋಜನೆಗೆ ನೋಂದಾಯಿಸಿಕೊಳ್ಳಬಹುದಾಗಿದೆ. ತಂದೆ- ತಾಯಿ ಇಬ್ಬರನ್ನೂ ಕಳೆದುಕೊಂಡ, ಬದುಕಿದ್ದ ಒಂದೇ ಪೋಷಕರನ್ನು ಕಳೆದುಕೊಂಡ ಹಾಗೂ ಈ ಮೊದಲೇ ಪೋಷಕರನ್ನು ಕಳೆದುಕೊಂಡು ಬಳಿಕ ತಮ್ಮನ್ನು ನೋಡಿಕೊಳ್ಳುತ್ತಿದ್ದವರನ್ನೂ ಕಳೆದುಕೊಂಡ ಮಕ್ಕಳು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ. ಪೋಷಕರ ಮರಣದ ದಿನಾಂಕದಂದು ಮಕ್ಕಳಿಗೆ 18 ವರ್ಷ ಪೂರೈಸಿರಬಾರದು.
ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಮೇ 29ರಂದು ಕೋವಿಡ್ 19ನಿಂದ ತಂದೆ – ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳ ಕಲ್ಯಾಣಕ್ಕಾಗಿ ಈ ಯೋಜನೆಯನ್ನು ಘೋಷಿಸಿದ್ದರು.