ಮಾರ್ಚ್ 31ಕ್ಕೆ 2022ರ ಹಣಕಾಸು ವರ್ಷ ಅಂತ್ಯವಾಗ್ತಿದೆ. ಹಾಗಾಗಿ ನಾಳೆಯಿಂದಲೇ ಮುಂದಿನ ಹಣಕಾಸು ವರ್ಷ ಆರಂಭವಾಗುತ್ತಿದ್ದು, ಸಾಕಷ್ಟು ಬದಲಾವಣೆಗಳನ್ನು ನಿರೀಕ್ಷಿಸಬಹುದು. ಏಪ್ರಿಲ್ 1ರಿಂದ ಹಣಕಾಸು ವಿಷಯದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ ಅನ್ನೋದನ್ನು ಮೊದಲೇ ತಿಳಿದುಕೊಳ್ಳೋದು ಒಳಿತು.
ಏಪ್ರಿಲ್ 1ರಿಂದ ಪೋಸ್ಟ್ ಆಫೀಸ್ MIS, SCSC ಅಥವಾ ಟರ್ಮ್ ಡೆಪಾಸಿಟ್ ಮೇಲಿನ ಬಡ್ಡಿಯನ್ನು ನಗದು ರೂಪದಲ್ಲಿ ನೀಡಲಾಗುವುದಿಲ್ಲ, ಬದಲಿಗೆ ಉಳಿತಾಯ ಖಾತೆಗಳಲ್ಲಿ ನೀಡಲಾಗುತ್ತದೆ. ಹಾಗಾಗಿ ಅಂತಹ ಖಾತೆದಾರರು ತಮ್ಮ ಅಂಚೆ ಕಛೇರಿಯ ಉಳಿತಾಯ ಖಾತೆಯನ್ನು ಈ ಖಾತೆಗಳೊಂದಿಗೆ ಲಿಂಕ್ ಮಾಡಬೇಕು. ಈ ಬಗ್ಗೆ ಈಗಾಗಲೇ ಅಂಚೆ ಕಚೇರಿ ಸೂಚನೆಯನ್ನು ನೀಡಿದೆ.
ಬಡ್ಡಿಯನ್ನು ಖಾತೆದಾರರ ಅಂಚೆ ಕಚೇರಿ ಉಳಿತಾಯ ಖಾತೆ ಅಥವಾ ಬ್ಯಾಂಕ್ ಖಾತೆಗೆ ಮಾತ್ರ ಜಮಾ ಮಾಡಲಾಗುವುದು. ಖಾತೆದಾರರು ತಮ್ಮ ಉಳಿತಾಯ ಖಾತೆಯನ್ನು ಹಿರಿಯ ನಾಗರಿಕರ ಉಳಿತಾಯ ಯೋಜನೆಯೊಂದಿಗೆ ಲಿಂಕ್ ಮಾಡಲು ಸಾಧ್ಯವಾಗದಿದ್ದರೆ, ಮಾಸಿಕ ಆದಾಯ ಯೋಜನೆ ಮತ್ತು ಟರ್ಮ್ ಡೆಪಾಸಿಟ್ ಸ್ಕೀಮ್ ನಲ್ಲಿ ಬಾಕಿ ಇರುವ ಬಡ್ಡಿಯನ್ನು ಪೋಸ್ಟ್ ಆಫೀಸ್ ಉಳಿತಾಯ ಖಾತೆಯಲ್ಲಿ ಕ್ರೆಡಿಟ್ ಮೂಲಕ ಅಥವಾ ಚೆಕ್ ಮೂಲಕ ಮಾತ್ರ ಪಾವತಿಸಬೇಕು.
ಕ್ರಿಪ್ಟೋ ಕರೆನ್ಸಿ ತೆರಿಗೆ
ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ವರ್ಚುವಲ್ ಡಿಜಿಟಲ್ ಆಸ್ತಿಗಳ ವರ್ಗಾವಣೆ ಅಥವಾ ಕ್ರಿಪ್ಟೋಕರೆನ್ಸಿ ಮೇಲೆ ಶೇ.30 ರಷ್ಟು ತೆರಿಗೆ ವಿಧಿಸಲಾಗಿತ್ತು. 2022ರ ಹಣಕಾಸು ಮಸೂದೆಯ ತಿದ್ದುಪಡಿಗಳನ್ನು ಸಂಸತ್ತಿನ ಕೆಳಮನೆಯಲ್ಲಿ ಈಗಾಗಲೇ ಅಂಗೀಕರಿಸಲಾಗಿದೆ. ಹಾಗಾಗಿ ಏಪ್ರಿಲ್ 1ರಿಂದ ಕ್ರಿಪ್ಟೋ ಸ್ವತ್ತುಗಳ ವರ್ಗಾವಣೆಯಿಂದ ಬರುವ ಆದಾಯ ಅಥವಾ ಲಾಭದ ಮೇಲೆ ಶೇ.30 ರಷ್ಟು ತೆರಿಗೆಯನ್ನು ವಿಧಿಸಲಾಗುತ್ತದೆ. ಇದಲ್ಲದೆ, ಕ್ರಿಪ್ಟೋಗಳ ಖರೀದಿ ಮತ್ತು ಮಾರಾಟದ ಮೇಲೆ ಶೇ.1 ರಷ್ಟು TDS ಕೂಡ ಇರುತ್ತದೆ.
ಟಿಡಿಎಸ್ ನಲ್ಲಿ ಬದಲಾವಣೆ
2020-21ನೇ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆಯನ್ನು ಸಲ್ಲಿಸದೇ ಇದ್ದಲ್ಲಿ ಹೊಸ ಹಣಕಾಸು ವರ್ಷದಲ್ಲಿ TDS/TCS ಹೊರೆ ಹೆಚ್ಚಾಗಲಿದೆ. ನೀವು 2019-20ರಲ್ಲಿ ತೆರಿಗೆ ಸಲ್ಲಿಸಿದ್ದು, 2020-21ರಲ್ಲಿ ಟ್ಯಾಕ್ಸ್ ಕಟ್ಟದೇ ಇದ್ದರೆ ಮತ್ತು ಅದೇ ಹಣಕಾಸು ವರ್ಷದಲ್ಲಿ ಒಟ್ಟು TDS 50,000 ರೂಪಾಯಿಗಿಂತ ಹೆಚ್ಚಿದ್ದರೆ, ಈ ಹಣಕಾಸು ವರ್ಷದಲ್ಲಿ TDS, TCS ರೂಪದಲ್ಲಿ ನೀವು ಹೆಚ್ಚಿನ ಮೊತ್ತವನ್ನು ಭರಿಸಬೇಕಾಗುತ್ತದೆ. ರಿಕರಿಂಗ್ ಡೆಪಾಸಿಟ್ಸ್, ಫಿಕ್ಸೆಡ್ ಡೆಪಾಸಿಟ್ಸ್, ಡಿವಿಡೆಂಡ್ ಆದಾಯ, ಹಾಗೂ ಆನ್ಯುಯಿಟಿ ಪೇಮೆಂಟ್ ಗಳಿಗೆ ಮಾತ್ರ ಈ ನಿಯಮ ಅನ್ವಯಿಸುತ್ತದೆ.
ಸಣ್ಣ ಉಳಿತಾಯ ಯೋಜನೆಯ ಬಡ್ಡಿದರ
ಸಣ್ಣ ಉಳಿತಾಯ ಯೋಜನೆಗಳಿಗೆ ಸರ್ಕಾರ ಇನ್ನೂ ಹೊಸ ಬಡ್ಡಿ ದರಗಳನ್ನು ಪ್ರಕಟಿಸಿಲ್ಲ. ಮುಂದಿನ ಹಣಕಾಸು ವರ್ಷದಲ್ಲಿ ದರದಲ್ಲಿ ಬದಲಾವಣೆ ಆಗಬಹುದು. ಅಂಚೆ ಕಛೇರಿಯ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳನ್ನು ಸತತ 7 ತ್ರೈಮಾಸಿಕಗಳವರೆಗೆ ಬದಲಾಯಿಸಿಲ್ಲ.
ಎಲ್ ಪಿ ಜಿ ದರ
ಎಲ್ ಪಿ ಜಿ ಬೆಲೆಗಳನ್ನು ಪ್ರತಿ ತಿಂಗಳು ಪರಿಷ್ಕರಿಸಲಾಗುತ್ತದೆ. ದ್ರವೀಕೃತ ಪೆಟ್ರೋಲಿಯಂ ಅನಿಲದ ಬೆಲೆಗಳಲ್ಲಿ ಕೂಡ ಬದಲಾವಣೆ ಆಗಬಹುದು. ಮಾರ್ಚ್ 22ರಂದು ಎಲ್‌ಪಿಜಿ ದರವನ್ನು ಪ್ರತಿ ಸಿಲಿಂಡರ್‌ಗೆ 50 ರೂಪಾಯಿ ಏರಿಕೆ ಮಾಡಲಾಗಿದೆ.