ಕರ್ನಾಟಕ ಲೋಕಸೇವಾ ಆಯೋಗವು ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಇಂಜಿನಿಯರ್ ಹುದ್ದೆಗಳ ನೇಮಕಾತಿಗೆ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.
ಹೈದರಾಬಾದ್ ಕರ್ನಾಟಕದ 60 ಸೇರಿದಂತೆ ಒಟ್ಟು 660 ಸಹಾಯಕ ಇಂಜಿನಿಯರ್ (ಗ್ರೇಡ್ 1) ಹುದ್ದೆಗಳ ಸಂದರ್ಶನಕ್ಕೆ 1,974 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. 2021ರ ಡಿಸೆಂಬರ್ 14 ಮತ್ತು 15 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿದ್ದು, ಅಂದು ರೈಲು ವಿಳಂಬವಾದ ಕಾರಣಕ್ಕೆ ಕೆಲ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತಲುಪಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಂತವರಿಗೆ ಡಿಸೆಂಬರ್ 29ರಂದು ಮರು ಪರೀಕ್ಷೆ ನಡೆಸಲಾಗಿತ್ತು.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಈ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪರೀಕ್ಷೆಯನ್ನು ನಡೆಸಲಾಗಿದ್ದರೂ ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಈ ನೇಮಕಾತಿಯನ್ನು ರದ್ದುಗೊಳಿಸಿ ಹೊಸದಾಗಿ ಹೈದರಾಬಾದ್ ಕರ್ನಾಟಕಕ್ಕೆ 60 ಹುದ್ದೆಗಳನ್ನು ಸೇರಿಸಿ 2020 ರ ಜುಲೈ 30 ರಂದು ಅಧಿಸೂಚನೆ ಹೊರಡಿಸಿತ್ತು.