ʼಸ್ವಾತಂತ್ರ್ಯ ಅಮೃತ ಮಹೋತ್ಸವ’ದ ಅಂಗವಾಗಿ ಜೂನ್ 15ರಿಂದ ಸೆಪ್ಟೆಂಬರ್ 30ರವರೆಗೆ 75 ದಿನಗಳ ಕಾಲ ಕೋವಿಡ್ ಬೂಸ್ಟರ್ ಡೋಸ್ ನೀಡುವ ಕುರಿತಂತೆ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದು, ಈ ಅವಧಿ ಪೂರ್ಣಗೊಳ್ಳಲು ಇನ್ನು ಕೇವಲ 12 ದಿನ ಮಾತ್ರ ಬಾಕಿ ಇದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಜನತೆ ಇದಕ್ಕೆ ಸ್ಪಂದಿಸಿಲ್ಲ ಎಂದು ಹೇಳಲಾಗಿದೆ.
ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಆಸ್ಪತ್ರೆಗಳಲ್ಲಿ ಉಚಿತ ಕೋವಿಡ್ ಬೂಸ್ಟರ್ ಡೋಸ್ ನೀಡಲಾಗುತ್ತಿದ್ದು, ಆದರೆ ಈವರೆಗೆ 91.85 ಲಕ್ಷ ಜನರು ಮಾತ್ರ ಬೂಸ್ಟರ್ ಡೋಸ್ ಪಡೆದಿದ್ದಾರೆ ಎನ್ನಲಾಗಿದೆ. ಇನ್ನು 3.76 ಕೋಟಿ ಜನರು ಲಸಿಕೆ ಪಡೆಯುವುದು ಬಾಕಿ ಇದ್ದು, ಆದರೆ ಕೊರೋನಾ ಸೋಂಕು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಲಸಿಕೆ ಪಡೆಯಲು ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಕೋವಿಡ್ ಸೋಂಕು ಕಡಿಮೆಯಾಗಿದ್ದರೂ ಸಹ ಈ ಕುರಿತು ನಿರ್ಲಕ್ಷ್ಯ ಬೇಡ. ಬೂಸ್ಟರ್ ಡೋಸ್ ಪಡೆಯುವುದರ ಜೊತೆಗೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಳೆದುಕೊಳ್ಳುವುದು ಅಗತ್ಯ ಎಂಬುದು ತಜ್ಞರ ಅಭಿಪ್ರಾಯವಾಗಿದ್ದು, ಆದರೆ ಸಾರ್ವಜನಿಕರು ಮಾತ್ರ ಇವುಗಳನ್ನು ಪಾಲಿಸುತ್ತಿಲ್ಲ. ಸರ್ಕಾರವೂ ಸಹ ಕೊರೊನಾ ಸೋಂಕು ಹೆಚ್ಚಳವಾದಾಗ ಎಚ್ಚೆತ್ತುಕೊಳ್ಳುವುದರ ಬದಲು ಈಗಲೇ ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ.