ಕೇರಳ: ಪ್ರತಿ ವರ್ಷ ಡಿಸೆಂಬರ್- ಜನವರಿ ವೇಳೆಯಲ್ಲಿ ಲಕ್ಷಾಂತರ ಶಬರಿ ಮಾಲಾಧಾರಿಗಳು ಶಬರಿ ಮಲೆಗೆ ಹೋಗ್ತಾರೆ. ಶ್ರದ್ಧೆ ಭಕ್ತಿಯಿಂದ ಮಾಲೆ ಧರಿಸಿ ಇರುಮುಡಿ ಹೊತ್ತು ಹೋಗುವ ಈ ಅಯ್ಯಪ್ಪ ಮಾಲಾಧಾರಿಗಳು ತಾವು ಶಬರಿಮಲೆಗೆ ಹೋಗುವಾಗ ಸೆಲೆಬ್ರಿಟಿ ಹಾಗೂ ರಾಜಕಾರಣಿಗಳ ಫೋಟೋ ತೆಗೆದುಕೊಂಡು ಹೋಗ್ತಾರೆ. ಇದೀಗ ಈ ಪದ್ದತಿಗೆ ಕೋರ್ಟ್ ಕಡಿವಾಣ ಹಾಕುತ್ತಿದೆ.
ಹೌದು, ಶಬರಿಮಲೆಗೆ ಬರುವ ಯಾತ್ರಿಗಳು ಸೆಲೆಬ್ರಿಟಿಗಳ ಫೋಟೋ, ಪೋಸ್ಟರ್ ಗಳನ್ನು ಹಿಡಿದುಕೊಂಡು ಬರುವಂತಿಲ್ಲ. ಅಕಸ್ಮಾತ್ ಬಂದರೆ ಅಯ್ಯಪ್ಪನ ಸನ್ನಿಧಾನದ ಪ್ರವೇಶ ನೀಡಬಾರದು ಅಂತ ಕೇರಳ ಹೈಕೋರ್ಟ್ ತೀರ್ಪು ನೀಡಿದೆ.
ಯಾತ್ರಾರ್ಥಿಯೊಬ್ಬರು ಈ ಕುರಿತಂತೆ ದೂರು ದಾಖಲು ಮಾಡಿದ್ದರು. ಅದರ ಅನ್ವಯ
ನ್ಯಾಯಮೂರ್ತಿ ಅನಿಲ್ ಕೆ. ನರೇಂದ್ರನ್ ಮತ್ತು ನ್ಯಾಯಮೂರ್ತಿ ಪಿ.ಜಿ. ಅಜಿತ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಯನ್ನು ನಡೆಸಿದೆ.
ತಿರುವಾಂಕೂರು ದೇವಸ್ವಂ ಮಂಡಳಿಗೆ ಪ್ರತಿಯೊಬ್ಬ ಅಯ್ಯಪ್ಪ ಭಕ್ತ ತನ್ನ ಪೂಜಾ ಆರಾಧನವನ್ನು ಪದ್ದತಿಯಂತೆ ಮಾಡಬೇಕು. ಸಾಂಪ್ರದಾಯಿಕ ವಿಧಿಗಳಂತೆ ಮಾಡುವುದನ್ನು ನೋಡಿಕೊಳ್ಳಬೇಕೆಂದು ಕೋರ್ಟ್ ನಿರ್ದಶನ ನೀಡಿದೆ. ಇನ್ನು ಯಾವುದೇ ಭಕ್ತರು ಫೋಟೋ, ಪೋಸ್ಟರ್ ತರಬಾರದು ಎಂತಲೂ ಹೇಳಿದೆ. ಇತ್ತೀಚೆಗೆ ಈ ರೀತಿಯ ಅನೇಕ ಘಟನೆಗಳು ಆಗಿದ್ದವು.