ಗಣಪತಿ ಹಬ್ಬ ಅಂದರೆ ನಿಜಕ್ಕೂ ಹಬ್ಬವೇ, ಮನೆಗಳಲ್ಲಿ ಗಣಪನಿಗೆ ಪ್ರಿಯವಾದ ನಾನಾ ರೀತಿಯ ಉಂಡೆಗಳನ್ನು ಮಾಡಲಾಗುತ್ತದೆ. ಭಕ್ಷ್ಯ ಭೋಜನಗಳನ್ನು ಮಾಡಿ ನೈವೇದ್ಯ ಮಾಡಲಾಗುತ್ತದೆ. ಗಣಪತಿ ಹಬ್ಬ ಯುವಕರಿಗೆ ಹೆಚ್ಚು ಇಷ್ಟ. ಯುವಕರು ತಂಡ ಕಟ್ಟಿಕೊಂಡು ತಮ್ಮ ಪ್ರದೇಶಗಳಲ್ಲಿ ಗಣಪತಿ ಇಟ್ಟು ಪೂಜಿಸುತ್ತಾರೆ. ಇದಕ್ಕಾಗಿ ತಿಂಗಳಿಂದಲೇ ತಯಾರಿ ನಡೆದಿರುತ್ತದೆ.
ಗಣಪತಿ ಇಡಲು ಆಯಾ ಏರಿಯಾಗಳ ಯುವಕರು ನಿಗದಿ ಮಾಡಿದ ಸ್ಥಳದಲ್ಲಿ ಪೆಂಡಾಲ್ ಹಾಕುತ್ತಾರೆ. ಅಲಂಕಾರ ಮಾಡುತ್ತಾರೆ. ಬೇರೆ ಯುವಕರ ಗಣಪತಿಗಳಿಗಿಂತ ಅದ್ಧೂರಿಯಾಗಿರಲಿ ಎಂದು ಅಲಂಕಾರಕ್ಕೆ ಹೆಚ್ಚು ಖರ್ಚು ಮಾಡುತ್ತಾರೆ. ಅಲ್ಲದೇ ತಮಗೆ ಇಂತಹುದೇ ಗಣಪತಿ ತಯಾರಿಸಿ ಕೊಡಬೇಕೆಂದು ಮೊದಲೇ ಮೂರ್ತಿ ತಯಾರಕರ ಬಳಿ ಮುಂಗಡ ಕೊಟ್ಟು ಹೇಳಿರುತ್ತಾರೆ.
ಹೀಗೆ ತಂದ ಗಣಪತಿಯನ್ನು ಮಂಟಪದಲ್ಲಿ, 3, 5, 9, 11 ಹೀಗೆ ಹಲವು ದಿನಗಳ ಕಾಲ ಇಟ್ಟು ಪೂಜಿಸುತ್ತಾರೆ. ಗಣಪತಿ ಇರುವ ದಿನಗಳಲ್ಲಿ ಅದ್ದೂರಿ ಆರ್ಕೆಸ್ಟ್ರಾ, ಪೂಜೆ, ಹೋಮ, ಹವನ ಮಾಡಲಾಗುತ್ತದೆ. ಧ್ವನಿವರ್ಧಕಗಳ ಹಾವಳಿಯೂ ಜೋರಾಗಿರುತ್ತದೆ. ಗಣಪತಿ ವಿಸರ್ಜನೆಗೂ ಮುನ್ನ ನಡೆಯುವ ಮೆರವಣಿಗೆ ಎಂದರೆ ಯುವಕರಿಗಂತೂ ಹಬ್ಬ. ಕಿವಿಗಡಚ್ಚಿಕ್ಕುವ ಸೌಂಡ್ ನಲ್ಲಿ ಹಾಡು, ಕುಣಿತ ಹೀಗೆ ಅದ್ದೂರಿ ಮೆರವಣಿಗೆಯೊಂದಿಗೆ ಗಣಪತಿಯನ್ನು ವಿಸರ್ಜಿಸುತ್ತಾರೆ.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ತಿಲಕರು, ಯುವಕರನ್ನು ಒಂದು ಕಡೆ ಸೇರುವಂತೆ ಮಾಡುವ ಉದ್ದೇಶದಿಂದ ಮನೆಗಳಲ್ಲಿ ಇಟ್ಟು ಮಾತ್ರ ಪೂಜಿಸುತ್ತಿದ್ದ ಗಣಪತಿಯನ್ನು ಸಾರ್ವಜನಿಕವಾಗಿ ಇಟ್ಟು ಪೂಜಿಸುವ ಸಂಪ್ರದಾಯ ಆರಂಭಿಸಿದರು. ಆ ಮೂಲಕ ಯುವಕರು ಒಂದೆಡೆ ಸೇರಿ ಗಣಪತಿ ಇಟ್ಟು ಪೂಜಿಸುವ ಸಂಪ್ರದಾಯ ಬೆಳೆದು ಬಂದಿತು. ಅಂತೆಯೇ ಯುವಕರು ಸಡಗರ- ಸಂಭ್ರಮದಿಂದ ಗಣಪತಿ ಹಬ್ಬವನ್ನು ಆಚರಿಸುತ್ತಾರೆ.