ಈ ವರ್ಷದ ಗಣರಾಜ್ಯೋತ್ಸವದ ಆಚರಣೆಯು ಕೊರೋನಾ ನಡುವೆಯೇ ನಡೆಯುತ್ತಿದೆ. ಸಂಪ್ರದಾಯದಂತೆ ದೆಹಲಿಯ ರಾಜ್‌ಪಥ್‌ನಲ್ಲಿ ಭಾರತದ ಗಣತಂತ್ರತೆಯನ್ನ ಆಚರಿಸಲಾಗುತ್ತದೆ. ಪರೇಡ್ ಸಹ ಇರಲಿದೆ. ಸಾರ್ವಜನಿಕರಿಗು ಅವಕಾಶ ನೀಡಲಾಗಿದೆ. ಆದರೆ ಸುರಕ್ಷಿತ ಆಚರಣೆಗೆ ಒತ್ತುಕೊಟ್ಟಿದ್ದು, ಪರೇಡ್ ವೀಕ್ಷಣೆಗೆ ಕಠಿಣ ಕೋವಿಡ್ ನಿಯಮಗಳನ್ನ ಏರಲಾಗಿದೆ. 15 ವರ್ಷದೊಳಗಿನವರಿಗೆ ಹಾಗೂ ಸಂಪೂರ್ಣವಾಗಿ ವ್ಯಾಕ್ಸಿನೇಟ್ ಆಗದವರಿಗೆ ಅವಕಾಶವಿಲ್ಲ.
ಜನವರಿ 26ರ ಕಾರ್ಯಕ್ರಮದಲ್ಲಿ ಜನರು ಮಾಸ್ಕ್ ಗಳನ್ನು ಧರಿಸಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಎಲ್ಲಾ ಕೋವಿಡ್ ಪ್ರೋಟೋಕಾಲ್‌ಗಳಿಗೆ ಬದ್ಧರಾಗಿರಬೇಕು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಕಾರ್ಯಕ್ರಮದ ದಿನದಂದು, ಆಸನದ ಬ್ಲಾಕ್‌ಗಳನ್ನು ಬೆಳಿಗ್ಗೆ 7 ಗಂಟೆಗೆ ತೆರೆಯಲಾಗುವುದು. ಅದಕ್ಕೆ ಅನುಗುಣವಾಗಿ ಸಂದರ್ಶಕರು ಆಗಮಿಸಬೇಕು. ಪಾರ್ಕಿಂಗ್ ಸೀಮಿತವಾಗಿರುವುದರಿಂದ, ಸಂದರ್ಶಕರು ಕಾರ್‌ಪೂಲ್ ಅಥವಾ ಟ್ಯಾಕ್ಸಿ ಬಳಸಲು ಸೂಚಿಸಲಾಗಿದೆ. ಅವರ ಜೊತೆಗೆ ಮಾನ್ಯವಾದ ಗುರುತಿನ ಚೀಟಿ ತರಲು ದೆಹಲಿ ಪೊಲೀಸರು ಮಾರ್ಗದರ್ಶಿ ಬಿಡುಗಡೆ ಮಾಡಿದ್ದಾರೆ.
ಗಣರಾಜ್ಯೋತ್ಸವದ ಆಚರಣೆ ಸಂದರ್ಭದಲ್ಲಿ, ಡಿಸಿಪಿಗಳು, ಎಸಿಪಿಗಳು, ಇನ್‌ಸ್ಪೆಕ್ಟರ್‌ಗಳು, ಸಬ್-ಇನ್‌ಸ್ಪೆಕ್ಟರ್‌ಗಳು, ಇನ್ನಿತರ ಪೊಲೀಸ್ ಸಿಬ್ಬಂದಿ, ಕಮಾಂಡೋಗಳು, ಅಧಿಕಾರಿಗಳು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಜವಾನರನ್ನು ಸೇರಿ ಒಟ್ಟು 27,000 ಕ್ಕೂ ಹೆಚ್ಚು ಜನರನ್ನ ಭದ್ರತೆಗೆ ನಿಯೋಜಿಸಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಭಯೋತ್ಪಾದನಾ ವಿರೋಧಿ ಕ್ರಮಗಳನ್ನು ತೀವ್ರಗೊಳಿಸಲಾಗಿದೆ ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ತಾನಾ ಹೇಳಿದ್ದಾರೆ.