ಶಿವಮೊಗ್ಗ: ಗಣಪತಿ ಹಬ್ಬಕ್ಕೆ ಯಾವುದೇ ತೊಂದರೆ ಆಗದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಇದು ಹಿಂದೂಸ್ತಾನ ಭಾರತೀಯ ಸಂಸ್ಕೃತಿಗೆ ಒತ್ತು ಕೊಡುವ ಎಲ್ಲಾ ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಳ್ಳುತ್ತೇವೆ. ಇದಕ್ಕೆ ಯಾರ ಅಪ್ಪಣೆಯೂ ಬೇಕಾಗಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರ ಸಾವರ್ಕರ್ ಅವರ ಭಾವಚಿತ್ರವನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಹರಿದು ಹಾಕಿದ್ದರಿಂದ ಮತ್ತು ಹಿಂದೂ ಯುವಕನೋರ್ವನಿಗೆ ಚೂರಿ ಇರಿತ ಮಾಡಿದ್ದರಿಂದ ಶಿವಮೊಗ್ಗದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿತ್ತು. ಈಗ ಪೊಲೀಸ್ ಇಲಾಖೆಯ ಅವಿರತ ಶ್ರಮದಿಂದ ಪರಿಸ್ಥಿತಿ ಹತೋಟಿಗೆ ಬಂದಿದೆ ಎಂದು ಹೇಳಿದರು.
ವಿಚ್ಛಿದ್ರಕಾರಿ ಶಕ್ತಿಗಳ ದಮನಕ್ಕೆ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ವ್ಯಕ್ತಿಗಳಿಗೆ ಮತ್ತು ವ್ಯಾಪಾರಸ್ಥರಿಗೆ ತೊಂದರೆಯಾಗಬಾರದು ಎನ್ನುವ ನಿಟ್ಟಿನಲ್ಲಿ 23 ರ ವರೆಗೆ ಜಿಲ್ಲಾಡಳಿತ ಸೆಕ್ಷನ್ 144 ಜಾರಿ ಮಾಡಿದೆ. ಸಭೆ, ಸಮಾರಂಭ ಮೆರವಣಿಗೆಗಳಿಗೆ ಮಾತ್ರ ನಿಷೇಧವಿದ್ದು, ಶಾಲಾ – ಕಾಲೇಜುಗಳು ಮತ್ತು ವ್ಯಾಪಾರ ವಹಿವಾಟಿಗೆ ಯಾವುದೇ ಸಮಸ್ಯೆ ಇಲ್ಲ. ಗಲಾಟೆ ಆಗಬಾರದು ಎನ್ನುವ ದೃಷ್ಠಿಯಿಂದ ಕೈಗೊಂಡ ಜಿಲ್ಲಾಡಳಿತದ ಈ ನಿರ್ಧಾರ ಸ್ವಾಗತಿಸುತ್ತೇನೆ ಎಂದರು.
ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಮ್ಮ ನಾಯಕರಾದ ಬಿ.ಎಸ್. ಯಡಿಯೂರಪ್ಪ ಹಾಗೂ ಸಿಎಂ ಉತ್ತರ ನೀಡಿದ್ದಾರೆ. ಖಂಡನೆಯನ್ನೂ ವ್ಯಕ್ತಪಡಿಸಿದ್ದಾರೆ. ಅದಕ್ಕೆ ನನ್ನ ಸಹಮತವಿದೆ. ಬಾಳೆಹೊನ್ನೂರು ರಂಭಾಪುರಿ ಶ್ರೀಗಳ ಬಳಿ ಲಿಂಗಾಯತ ಧರ್ಮದ ವಿಚಾರದಲ್ಲಿ ಸಿದ್ಧರಾಮಯ್ಯ ಪಶ್ಚಾತ್ತಾಪದ ಹೇಳಿಕೆ ನೀಡಿದ್ದಾರೆ ಎಂದು ಸ್ವಾಮೀಜಿ ಹೇಳಿದ್ದಾರೆ. ಆದರೆ ಇದನ್ನು ಸಿದ್ಧರಾಮಯ್ಯ ಅಲ್ಲಗಳೆದಿದ್ದಾರೆ. ಈ ಗೊಂದಲದ ಬಗ್ಗೆ ಅವರೇ ಸ್ಪಷ್ಠೀಕರಣ ನೀಡಬೇಕು. ಅವರನ್ನೇ ಕೇಳಿ ಎಂದರು.