ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ತನ್ನದೇ ಆದ ಮಹತ್ವವಿದೆ. ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಬಾರದೆಂಬ ನಂಬಿಕೆ ಇದೆ.
ಗಣೇಶ ಚತುರ್ಥಿ ದಿನ ಚಂದ್ರನನ್ನು ನೋಡಿದರೆ ಅಪವಾದ ತಪ್ಪದು ಎಂಬ ಮಾತಿದೆ. ಪುರಾಣದ ಪ್ರಕಾರ, ಚತುರ್ಥಿಯಂದು ಚಂದ್ರನನ್ನು ನೋಡಿದ್ದ ಶ್ರೀಕೃಷ್ಣ ಶಮಂತಕ ಮಣಿಯನ್ನು ಕದ್ದ ಆರೋಪಕ್ಕೆ ಗುರಿಯಾಗುತ್ತಾನೆ.
ಗಣಪತಿ ತಿನಿಸುಗಳ ಪ್ರಿಯ. ವಿವಿಧ ಬಗೆಯ ಭಕ್ಷ್ಯ ಭೋಜನಗಳನ್ನು ಸೇವಿಸಿದ ಗಣಪತಿ ಇಲಿಯನ್ನೇರಿ ಹೋಗುವಾಗ, ಹೊಟ್ಟೆ ಬಿರಿದಿರುತ್ತದೆ. ಇದನ್ನು ಗಮನಿಸಿದ ಚಂದ್ರ ನಗುತ್ತಾನೆ.
ಅದಕ್ಕೆ ಚಂದ್ರನಿಗೆ ಶಾಪ ಕೊಡುವ ಗಣಪತಿ ಚೌತಿಯಂದು ಚಂದ್ರನನ್ನು ಯಾರೂ ನೋಡಬಾರದು, ನೋಡಿದರೆ ಅಪವಾದ ತಪ್ಪದು ಎಂದು ಹೇಳುತ್ತಾನೆ. ಹೀಗೊಂದು ನಂಬಿಕೆ ಬೆಳೆದು ಬಂದಿದೆ. ಅನೇಕರು ಚೌತಿಯ ದಿನ ಚಂದ್ರನನ್ನು ನೋಡಬಾರದೆಂದು ಮನೆಯಿಂದ ಹೊರಗೇ ಬರುವುದಿಲ್ಲ.
ಸಾಮಾನ್ಯವಾಗಿ ಚಂದ್ರನನ್ನು ಜನ ದಿನಾಲು ಗಮನಿಸುವುದಿಲ್ಲ. ಭಾದ್ರಪದ ಶುಕ್ಲದ ಚೌತಿಯ ದಿನದಂದು ಮಾತ್ರ ನೋಡಬಾರದೆನಿಸಿದರೂ, ಆಕಸ್ಮಿಕವಾಗಿ ಚಂದ್ರ ಕಾಣಿಸಿಕೊಳ್ಳುತ್ತಾನೆ. ಚಂದ್ರನನ್ನು ನೋಡಿದವರಿಗೆ ಅಪವಾದ ಬರುತ್ತದೆ. ಕೃಷ್ಣ ಪಕ್ಷದ ಚೌತಿಯ ಚಂದ್ರನನ್ನು ನೋಡಿದರೆ, ಅಪವಾದ ದೂರವಾಗುತ್ತದೆ ಎಂಬ ನಂಬಿಕೆ ಬೆಳೆದು ಬಂದಿದೆ.