ಲಾಕ್ ಡೌನ್ ಅವಧಿಯಲ್ಲಿ ಗಡ್ಡ ಬೆಳೆಸಿದವರ ಸಂಖ್ಯೆ ಕಡಿಮೆಯೇನಿಲ್ಲ. ಒಬ್ಬೊಬ್ಬರು ಒಂದೊಂದು ಶೈಲಿಯಲ್ಲಿ ಫೋಟೋ ತೆಗೆಸಿಕೊಂಡದ್ದೂ ಅಯಿತು. ಆ ಅವಧಿಯಲ್ಲಿ ಸೆಲೂನ್ಗಳು ತೆರೆಯದಿದ್ದೂ ಅದಕ್ಕೊಂದು ಕಾರಣವಾಯಿತು.
ಗಡ್ಡಕ್ಕೆ ಸರಿಯಾಗಿ ಅರೈಕೆ ಇಲ್ಲದೆ ಹೋದರೆ ಅದರಿಂದಲೂ ಹಲವು ಸಮಸ್ಯೆಗಳು ಕಾಡಬಹುದು. ಮುಖ್ಯವಾಗಿ ತಲೆ ಕೂದಲಿನಂತೆ ಗಡ್ಡವೂ ದಪ್ಪವಾಗಿ ಹುಲುಸಾಗಿ ಬೆಳೆಯುವುದರಿಂದ ಅದರೊಳಗೆ ಹೊಟ್ಟು ಸೇರಿಕೊಳ್ಳಬಹುದು. ಇದರಿಂದ ತುರಿಕೆ ಶುರುವಾಗಿ ಮುಖ ಗಲ್ಲದ ಮೇಲೆ ಗಾಯಗಳಾಗಬಹುದು. ಇಲ್ಲವೇ ಹೇನುಗಳ ಹುಟ್ಟಿಗೆ ಕಾರಣವಾಗಬಹುದು. ಹಾಗಾಗಿ ಗಡ್ಡವನ್ನು ಸ್ವಚ್ಛವಾಗಿ ತೊಳೆದು ಅರೈಕೆ ಮಾಡುವುದು ಬಹಳ ಮುಖ್ಯ.
ಗಡ್ಡದಲ್ಲಿ ಕಾಣಿಸಿಕೊಳ್ಳುವ ಬ್ಯಾಕ್ಟೀರಿಯಾಗಳು ಚರ್ಮದವರೆಗೆ ತಲುಪಿ ಸೋಂಕು ಹರಡಿ ಕೀವುಗುಳ್ಳೆ ಮತ್ತು ಇತರ ತೊಂದರೆಗಳನ್ನು ಉಂಟು ಮಾಡುವ ಸಾಧ್ಯತೆ ಇದೆ. ಶಿಲೀಂಧ್ರಗಳೂ ಇವುಗಳೊಂದಿಗೆ ಸೇರಿ ನಿಮ್ಮ ತ್ವಚೆಯನ್ನು ಹಾಳುಗೆಡವಬಹುದು.
ಪ್ರಯಾಣ ಮಾಡುವ ವೇಳೆ ಧೂಳು ಅಥವಾ ಮತ್ತಿತರ ಕಸ ಸೇರಿಕೊಂಡು ನಿಮ್ಮ ಗಡ್ಡ ಗಲೀಜಾಗಬಹುದು. ಆಹಾರ ಸೇವಿಸುವಾಗ ಬಾಯಿಯ ಸಮೀಪ ಬಂದು ಕಿರಿಕಿರಿ ಮಾಡಬಹುದು. ಹಾಗಾಗಿ ಇವೆಲ್ಲವುಗಳ ಬಗ್ಗೆ ಎಚ್ಚರ ವಹಿಸುವುದು ಬಹಳ ಮುಖ್ಯ.