ಮದುವೆಯ ನಂತರ ಗಂಡ-ಹೆಂಡತಿ ಒಟ್ಟಿಗೆ, ಒಂದೇ ಕೋಣೆಯಲ್ಲಿ ಮಲಗುವುದು ಸಾಮಾನ್ಯ. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ನಿಯಮವೂ ಹೌದು. ಆದರೆ ಗಂಡ-ಹೆಂಡತಿ ಪ್ರತ್ಯೇಕ ಕೊಠಡಿಗಳಲ್ಲಿ ಮಲಗಿದರೆ ಅದರಿಂದಲೂ ಸಾಕಷ್ಟು ಪ್ರಯೋಜನಗಳಿವೆ. ಇದು ಬಹುತೇಕರಿಗೆ ತಿಳಿದಿಲ್ಲ. ಗಂಡ-ಹೆಂಡತಿ ಬೇರೆ ಬೇರೆ ಕೋಣೆಗಳಲ್ಲಿ ಮಲಗುವುದು ತಪ್ಪೆಂದು ಸಮಾಜದಲ್ಲಿ ಪರಿಗಣಿಸಲಾಗಿದೆ. ಆದರೆ ಇದರಲ್ಲಿರೋ ಲಾಭವನ್ನು ತಿಳಿದುಕೊಂಡರೆ ಪ್ರತಿಯೊಬ್ಬ ದಂಪತಿಗಳೂ ಈ ರೀತಿ ಪ್ರಯತ್ನಿಸಬಹುದು.
ನಿದ್ರೆಗೆ ತೊಂದರೆಯಾಗುವುದಿಲ್ಲ
ಗಂಡ-ಹೆಂಡತಿ ಪ್ರತ್ಯೇಕ ಕೊಠಡಿಗಳಲ್ಲಿ ಮಲಗಿದರೆ ಮೊದಲ ಮತ್ತು ಪ್ರಮುಖ ಅನುಕೂಲವೆಂದರೆ ಇಬ್ಬರ ನಿದ್ದೆಗೆ ಯಾವುದೇ ಭಂಗ ಬರುವುದಿಲ್ಲ. ಪತಿ-ಪತ್ನಿ ಯಾರಾದರೂ ಒಬ್ಬರಿಗೆ ತೀವ್ರ ಗೊರಕೆ ಬರುತ್ತಿದ್ದರೆ ಅದರಿಂದ ನಿದ್ರೆಗೆ ಅಡಚಣೆಯಾಗುತ್ತದೆ. ಆದರೆ ಬೇರೆ ಬೇರೆ ಕೋಣೆಯಲ್ಲಿ ಮಲಗುವುದರಿಂದ ಈ ಸಮಸ್ಯೆ ಇರುವುದಿಲ್ಲ. ಆರಾಮಾಗಿ ನಿದ್ರಿಸಿ ಬೆಳಗ್ಗೆ ಫ್ರೆಶ್ ಆಗಿ ಏಳಬಹುದು.
ಸಂಬಂಧ ಇನ್ನಷ್ಟು ಸುಧಾರಿಸುತ್ತದೆ
ಸ್ವಲ್ಪ ಸಮಯದ ಅಂತರವು ನಿಮ್ಮ ಸಂಬಂಧವನ್ನು ಹೆಚ್ಚು ಉತ್ತಮಗೊಳಿಸುತ್ತದೆ. ಇಬ್ಬರಿಗೂ ನೆಮ್ಮದಿಯಿಂದ ವಿಶ್ರಾಂತಿ ಪಡೆಯಲು ಸಮಯ ಸಿಗುತ್ತದೆ. ಈ ಕಾರಣದಿಂದಾಗಿ ಪರಸ್ಪರರ ಮೇಲೆ ಕೋಪವಿದ್ದರೆ ಅದು ಶಾಂತವಾಗುತ್ತದೆ. ಪತಿ-ಪತ್ನಿ ಮಧ್ಯೆ ಅಕಸ್ಮಾತ್ ಜಗಳವಾಗಿದ್ದರೂ ಬೇರೆ ಬೇರೆ ಕೋಣೆಗಳಲ್ಲಿ ಮಲಗಬೇಕು.
ನಿಮಗಾಗಿ ಸಮಯ ಸಿಗುತ್ತದೆ
ಗಂಡ-ಹೆಂಡತಿ ಪ್ರತ್ಯೇಕವಾಗಿ ಮಲಗಿದರೆ ಇಬ್ಬರಿಗೂ ಸಮಯ ಸಿಗುತ್ತದೆ. ಏಕೆಂದರೆ ಕೆಲವೊಮ್ಮೆ ಪತಿ ಟಿವಿ ವೀಕ್ಷಿಸಲು ಅಥವಾ ಕಛೇರಿಯ ಕೆಲಸ ಮಾಡಲು ಬಯಸುತ್ತಾರೆ. ಈ ಸಂದರ್ಭದಲ್ಲಿ ಪತ್ನಿಯ ನಿದ್ದೆಗೆ ತೊಂದರೆಯಾಗುತ್ತದೆ. ಮಾನಸಿಕ ಒತ್ತಡವು ಹೆಚ್ಚಾಗುತ್ತದೆ. ಪ್ರತ್ಯೇಕ ಕೋಣೆಯಲ್ಲಿ ಮಲಗಿದರೆ ಅಂತಹ ಸಮಸ್ಯೆ ಇರುವುದಿಲ್ಲ.