ಬೆಂಗಳೂರು : ಇತ್ತೀಚೆಗಷ್ಟೇ ಡಾಬಾ ಒಂದಕ್ಕೆ ಬೆಂಕಿ ಹಚ್ಚಿರುವ ಘಟನೆ ಬೆಳಕಿಗೆ ಬಂದಿತ್ತು. ಈ ಸಂದರ್ಭದಲ್ಲಿ ಕೆಲಸ ಮಾಡುತ್ತಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ. ಈ ಪ್ರಕರಣಕ್ಕೆ ಸದ್ಯ ಹೊಸ ತಿರುವು ಸಿಕ್ಕಿದೆ.
ಪತಿಯ ಮೇಲಿನ ಕೋಪಕ್ಕೆ ಪತ್ನಿಯೇ ಡಾಬಾಕ್ಕೆ ಬೆಂಕಿ ಇಡಲು ಸುಪಾರಿ ನೀಡಿದ್ದಾಳೆ ಎಂಬ ಮಾಹಿತಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಸೋಲದೇವನಹಳ್ಳಿ ಹತ್ತಿರ ಅರ್ಪಿತ್ ಎಂಬುವವರು ನಡೆಸುತ್ತಿದ್ದ ಯು ಟರ್ನ್ ಡಾಬಾಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಘಟನೆಯಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ.
ಬೆಂಕಿ ಹಚ್ಚಲು ಮಾಲೀಕನ ಹೆಂಡತಿ ಶೀತಲ್ ಸುಪಾರಿ ನೀಡಿದ್ದಾಳೆ ಎಂಬುವುದು ತನಿಖೆಯಿಂದ ತಿಳಿದು ಬಂದಿದೆ. ಶೀತಲ್ ಹಾಗೂ ಅರ್ಪಿತ್ ಮದುವೆಯಾದ ನಾಲ್ಕೇ ತಿಂಗಳಲ್ಲಿ ದೂರವಾಗಿದ್ದರು. ಪತ್ನಿ ತವರು ಮನೆಗೆ ಹೋಗಿದ್ದರೂ ಅರ್ಪಿತ್ ಮಾತ್ರ ಪತ್ನಿ ನೋಡಲು ತೆರಳಿರಲಿಲ್ಲ. ಇದರಿಂದ ಕೋಪಗೊಂಡ ಪತ್ನಿ ರೌಡಿಶೀಟರ್ ಮನುಕುಮಾರ್ ಎಂಬ ವ್ಯಕ್ತಿಗೆ 20 ಸಾವಿರ ರೂಪಾಯಿಯ ಸುಪಾರಿ ನೀಡಿದ್ದಳು. ಸುಪಾರಿ ಪಡೆದಿದ್ದ ಮನುಕುಮಾರ್ ತನ್ನ ಗೆಳೆಯರಾದ ಹೇಮಂತ್ ಹಾಗೂ ಮಂಜುನಾಥ್ ರೊಂದಿಗೆ ಸೇರಿ ಬೆಂಕಿ ಹಚ್ಚಲು ತೆರಳಿದ್ದ ಎಂದು ತಿಳಿದು ಬಂದಿದೆ.
ಆ ಸಂದರ್ಭದಲ್ಲಿ ಇವರ ಕೃತ್ಯವನ್ನು ಕೆಲಸಗಾರ ಪ್ರಶ್ನಿಸಿದ್ದ, ಭಯದಲ್ಲಿ ಕೆಲಸಗಾರನ ಮೇಲೆಯೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮನು ಕುಮಾರ್, ಹೇಮಂತ್ ಹಾಗೂ ಮಂಜುನಾಥ್ ನನ್ನು ಬಂಧಿಸಿದ್ದು, ಶೀತಲ್ ಗಾಗಿ ಬಲೆ ಬೀಸಿದ್ದಾರೆ.
ಈ ಡಾಬಾವನ್ನು ಸೋಲದೇವನಹಳ್ಳಿಯಲ್ಲಿ ಅರ್ಪಿತ್ ತನ್ನ ಇಬ್ಬರು ಸ್ನೇಹಿತರಾದ ದೀಪಕ್ ಹಾಗೂ ಸಚಿನ್ ರೊಂದಿಗೆ ನಡೆಸುತ್ತಿದ್ದ. ಈ ಪ್ರಕರಣದ ಕುರಿತು ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.