ಗಂಟಲ ಗ್ರಂಥಿಯಲ್ಲಿ ಉರಿಯೂತ ಸಾಮಾನ್ಯವಾಗಿ ಎಲ್ಲರಲ್ಲೂ ಆಗಾಗ ಕಾಣಿಸಿಕೊಳ್ಳುವ ಸಮಸ್ಯೆ. ಕಿವಿ, ಮೂಗು ಮತ್ತು ಗಂಟಲಿಗೆ ಸಾಕಷ್ಟು ಕಿರಿಕಿರಿ ಉಂಟುಮಾಡುತ್ತದೆ ಇದು. ಗಂಟಲಿನ ಒಳ ಭಾಗದಲ್ಲಿ ಮೊಟ್ಟೆಯ ಆಕಾರದ ಪ್ಯಾಡ್ ರೂಪುಗೊಳ್ಳುತ್ತದೆ, ಇದರಿಂದಾಗಿ ಉರಿಯೂತವನ್ನು ಎದುರಿಸಬೇಕಾಗುತ್ತದೆ. ವಾಸ್ತವವಾಗಿ ಟಾನ್ಸಿಲ್ಗಳು ನಮ್ಮನ್ನು ರಕ್ಷಿಸಲೆಂದೇ ರೂಪುಗೊಂಡಿರುತ್ತವೆ. ದೇಹದೊಳಗೆ ಯಾವುದೇ ಸೋಂಕು ಹೋಗದಂತೆ ತಡೆಯುತ್ತದೆ.
ಟಾನ್ಸಿಲ್‌ಗಳ ಮೇಲೆ ಸೋಂಕು ಬೆಳವಣಿಗೆಯಾದಾಗ ಅದನ್ನು ಗಲಗ್ರಂಥಿಯ ಉರಿಯೂತ ಎಂದು ಕರೆಯಲಾಗುತ್ತದೆ. ಈ ಸಮಸ್ಯೆಯು ಮಕ್ಕಳಲ್ಲಿ ಹೆಚ್ಚು. ಹಾಗಂತ ಉಳಿದ ವಯಸ್ಸಿನವರಿಗೂ ಇದು ಬರಬಹುದು. ವೈರಸ್ ಅಥವಾ ಬ್ಯಾಕ್ಟೀರಿಯಾದಿಂದ ಈ ಸಮಸ್ಯೆ ಉಂಟಾಗುತ್ತವೆ. ಟಾನ್ಸಿಲ್‌ಗಳು ಬಿಳಿ ರಕ್ತ ಕಣಗಳನ್ನು ಉತ್ಪಾದಿಸುತ್ತವೆ, ಇದು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಮೂಗು ಮತ್ತು ಬಾಯಿಯ ಮೂಲಕ ದೇಹವನ್ನು ಪ್ರವೇಶಿಸುವ ವೈರಸ್ ಮತ್ತು ಬ್ಯಾಕ್ಟೀರಿಯಾಗಳನ್ನು ಇದು ಎದುರಿಸುತ್ತದೆ. ಆದರೆ ಟಾನ್ಸಿಲ್ಗ್‌ಳು ಸೋಂಕಿನಿಂದ ಬಹಳ ದುರ್ಬಲವಾಗುತ್ತವೆ. ಸ್ಟ್ರೆಪ್ಟೋಕೊಕಲ್ ಬ್ಯಾಕ್ಟೀರಿಯಾದಂತಹ ಸೂಕ್ಷ್ಮಜೀವಿಗಳು ಟಾನ್ಸಿಲ್‌ಗಳಿಗೆ ಸೋಂಕು ತಗುಲಿಸಬಹುದು ಮತ್ತು ಸಮಸ್ಯೆಯನ್ನು ಉಲ್ಬಣಗೊಳಿಸಬಹುದು. ಇದಲ್ಲದೆ ಸಾಮಾನ್ಯ ಶೀತ ಮತ್ತು ಗಂಟಲು ನೋವಿಗೂ ಕಾರಣವಾಗಬಹುದು. ರೋಗಲಕ್ಷಣಗಳ ಬಗ್ಗೆ ತಿಳಿದುಕೊಂಡಿದ್ದರೆ ಸಮಯವನ್ನು ವ್ಯರ್ಥ ಮಾಡದೆ ಸರಿಯಾದ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಬಹುದು.
ಪ್ರಮುಖ ಲಕ್ಷಣಗಳೆಂದರೆ ಟಾನ್ಸಿಲ್‌ಗಳಲ್ಲಿ ಊತ. ಇದರ ಹೊರತಾಗಿ ಗಂಟಲು ನೋವು, ಟಾನ್ಸಿಲ್ ಕೆಂಪಾಗುವುದು, ಜ್ವರ, ಟಾನ್ಸಿಲ್ಗಳ ಮೇಲೆ ಹಳದಿ ಅಥವಾ ಬಿಳಿ ಲೇಪನ, ತಲೆನೋವು, ಬಾಯಿಯಲ್ಲಿ ಗುಳ್ಳೆಗಳು, ಕಿವಿಯಲ್ಲಿ ನೋವು, ಹಸಿವಿಲ್ಲದೇ ಇರುವುದು, ಗಂಟಲು ಬಿಗಿತ, ಒರಟಾದ ಧ್ವನಿ, ಹಾಲಿಟೋಸಿಸ್, ಶೀತ, ಆಹಾರವನ್ನು ನುಂಗಲು ತೊಂದರೆ ಇವೆಲ್ಲವೂ ಕಂಡು ಬರುತ್ತವೆ. ಮಕ್ಕಳಲ್ಲಿ ಪ್ರಮುಖವಾಗಿ ವಾಂತಿ, ಜೊಲ್ಲು ಸುರಿಸುವುದು, ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ.