ಮಾಜಿ ಸಚಿವ ಜನಾರ್ದನ ರೆಡ್ಡಿ ರಾಜಕೀಯದಲ್ಲಿ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಲು ಸಿದ್ಧತೆ ನಡೆಸಿದ್ದು, ಆದರೆ ಬಿಜೆಪಿಯಿಂದ ಅವರಿಗೆ ನಿರೀಕ್ಷಿತ ಪ್ರತಿಕ್ರಿಯೆ ದೊರೆಯುತ್ತಿಲ್ಲ. ಹೀಗಾಗಿ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪಿಸಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಾದ್ಯಂತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಸದ್ಯದಲ್ಲೇ ಈ ಕುರಿತು ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಗಂಗಾವತಿಯಿಂದ ಜನಾರ್ದನ ರೆಡ್ಡಿ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾತುಗಳು ಕಳೆದ ಒಂದು ವರ್ಷದಿಂದ ಕೇಳಿ ಬರುತ್ತಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಈಗ ಜನಾರ್ದನ ರೆಡ್ಡಿಯವರು ಗಂಗಾವತಿಯ ಕನಕಗಿರಿ ಮಾರ್ಗದ ಕ್ರಿಯೇಟಿವ್ ಲೇಔಟ್ ನಲ್ಲಿರುವ ಮನೆಯೊಂದನ್ನು 61 ಲಕ್ಷ ರೂಪಾಯಿಗಳಿಗೆ ಖರೀದಿಸಿದ್ದಾರೆ. ಇದರ ಜೊತೆಗೆ ಪಕ್ಕದಲ್ಲಿಯೇ ಇನ್ನೂ ಎರಡು ಮನೆ ಹಾಗೂ 2 ಎಕರೆ ಭೂಮಿಯನ್ನು ಬಾಡಿಗೆಗೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ತಮ್ಮ ಮುಂದಿನ ರಾಜಕೀಯ ನಡೆಯನ್ನು ಗಂಗಾವತಿಯಿಂದಲೇ ಆರಂಭಿಸಲು ಜನಾರ್ಧನ ರೆಡ್ಡಿ ಅವರು ನಿರ್ಧರಿಸಿದ್ದು, ಸದ್ಯದಲ್ಲಿಯೇ ತಮ್ಮ ಮನೆಯ ಗೃಹ ಪ್ರವೇಶ ನೆರವೇರಿಸಿ ಬಳಿಕ ಆತ್ಮೀಯರು, ಬೆಂಬಲಿಗರ ಸಭೆ ಕರೆಯಲಿದ್ದಾರೆ ಎಂದು ಹೇಳಲಾಗಿದೆ. ಬಳ್ಳಾರಿಗೆ ತೆರಳಲು ಸುಪ್ರೀಂ ಕೋರ್ಟ್ ತಡೆ ವಿಧಿಸಿರುವ ಕಾರಣ ಗಂಗಾವತಿಯಲ್ಲಿಯೇ ಉಳಿದು ಬಳ್ಳಾರಿ ರಾಜಕಾರಣದಲ್ಲೂ ತಮ್ಮ ಪ್ರಭಾವ ಬೀರುವ ಇರಾದೆ ಜನಾರ್ದನ ರೆಡ್ಡಿ ಅವರದ್ದಾಗಿದೆ ಎಂದು ಮೂಲಗಳು ಹೇಳುತ್ತಿವೆ.