ಕುತ್ತಿಗೆಗೆ ಸರಪಳಿ ಹಾಕಲಾಗಿದ್ದ ಮುಂಗುಸಿಯ ಜೊತೆ ಫೋಟೋಗೆ ಪೋಸ್ ನೀಡಿದ್ದ ನಟಿ ಶ್ರಬಂತಿ ಚಟರ್ಜಿಗೆ ಪಶ್ಚಿಮ ಬಂಗಾಳದ ಅರಣ್ಯ ಇಲಾಖೆ ಪ್ರಶ್ನೆ ಮಾಡಿದೆ.
ದೇಶದ ಎಲ್ಲಾ ಮುಂಗುಸಿ ಜಾತಿಗಳನ್ನು ಭಾರತೀಯ ವನ್ಯಜೀವಿ (ರಕ್ಷಣೆ) ಕಾಯಿದೆ, 1972 ರ ಶೆಡ್ಯೂಲ್ II (ಭಾಗ II) ಅಡಿಯಲ್ಲಿ ಸಂರಕ್ಷಿಸಲಾಗಿದೆ ಮತ್ತು ಅದನ್ನು ಉಲ್ಲಂಘಿಸಿದರೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದು.
ಫೋಟೋಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಫೆಬ್ರವರಿ 15 ರಂದು ಶ್ರಬಂತಿ ಚಟರ್ಜಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎರಡು ಬಾರಿ ಶ್ರಬಂತಿ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾರೆ. ಸೋಮವಾರ ಅವರು ವಿಚಾರಣೆಗೆ ಹಾಜರಾಗಿದ್ದು ಮಂಗಳವಾರ ಮತ್ತೊಮ್ಮೆ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ.
ನಾನು ಶೂಟಿಂಗ್ ಮಾಡುತ್ತಿದ್ದೆ. ಅದು ಬೇರೆಯವರ ಮುಂಗುಸಿಯಾಗಿತ್ತು. ನಾನು ಅದನ್ನು ನನ್ನ ಕೈಯಲ್ಲಿ ಹಿಡಿದುಕೊಂಡೆ ಅಷ್ಟೇ. ಮುಂಗುಸಿಯ ಒಡೆಯನೂ ಅಲ್ಲಿಯೇ ಇದ್ದ. ನಾನು ಈ ಪ್ರಕರಣ ಸಂಬಂಧ ಅಧಿಕಾರಿಗಳಿಗೆ ಎಲ್ಲಾ ರೀತಿಯ ಸಹಕಾರವನ್ನೂ ನೀಡುತ್ತಿದ್ದೇನೆ ಎಂದು ಶ್ರಬಂತಿ ಚಟರ್ಜಿ ಹೇಳಿದರು.