ಶೈಕ್ಷಣಿಕ ವರ್ಷ ಸಮೀಪಿಸುತ್ತಿದ್ದಂತೆಯೇ ಹೊಸದಾಗಿ ಶಾಲೆಗೆ ಸೇರ್ಪಡೆಯಾಗುವವರು ಹಾಗೂ ಮತ್ತೊಂದು ಶಾಲೆಗೆ ಪ್ರವೇಶ ಪಡೆಯುವರ ಪ್ರಕ್ರಿಯೆಯೂ ಆರಂಭವಾಗಿದೆ. ಇದರ ಮಧ್ಯೆ ಖಾಸಗಿ ಶಾಲೆಗಳು ಮನಬಂದಂತೆ ಶುಲ್ಕ ವಸೂಲಿ ಮಾಡುತ್ತಿವೆ ಎಂಬ ಆರೋಪವೂ ಕೇಳಿ ಬರುತ್ತಿದೆ.
ಈ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಹತ್ವದ ಸುತ್ತೋಲೆಯೊಂದನ್ನು ಹೊರಡಿಸಿದ್ದು, ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಂದ ಪಡೆಯುವ ಶುಲ್ಕದ ವಿವರಗಳನ್ನು ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಸೂಚಿಸಿದೆ.
ಅಲ್ಲದೆ ಏಪ್ರಿಲ್ ನಿಂದ ಪ್ರವೇಶ ಪ್ರಕ್ರಿಯೆ ಆರಂಭಿಸಬೇಕು ಎಂದು ತಿಳಿಸಲಾಗಿದ್ದು, ಜೊತೆಗೆ ಮಗು ಹಿಂದೆ ಓದುತ್ತಿದ್ದ ಶಾಲೆ ತೊರೆದು ಬೇರೆ ಶಾಲೆಗೆ ಪ್ರವೇಶ ಪಡೆದ ಸಂದರ್ಭದಲ್ಲಿ ತಕ್ಷಣವೇ ವರ್ಗಾವಣೆ ಪತ್ರ ನೀಡಬೇಕು ಎಂದು ತಿಳಿಸಲಾಗಿದೆ.
ಸಿಬಿಎಸ್‌ಸಿ, ಐ ಸಿ ಎಸ್ ಸಿ ಪಠ್ಯಕ್ರಮ ಅನುಸರಿಸುವ ಶಾಲೆಗಳಿಗೂ ಈ ನಿಯಮ ಅನ್ವಯವಾಗಲಿದ್ದು, ಡೊನೇಷನ್ ಪಡೆಯಬಾರದು ಎಂದು ತಿಳಿಸಲಾಗಿದೆ.
ಅಲ್ಲದೆ ಮಗುವಿನ ಪ್ರವೇಶಕ್ಕೆ ಪೋಷಕರಿಗೆ ಪ್ರವೇಶ ಪರೀಕ್ಷೆ ನಡೆಸಬಾರದೆಂದು ಸೂಚಿಸಲಾಗಿದ್ದು, ನಿಯಮಗಳನ್ನು ಉಲ್ಲಂಘಿಸಿದ ಶಾಲೆಗಳಿಗೆ ಒಂದು ಲಕ್ಷ ರೂಪಾಯಿ ದಂಡ, ಇದು ಪುನರಾವರ್ತನೆ ಆದರೆ ದಿನಕ್ಕೆ 10 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.