ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾ ಗಳಿಕೆಯಲ್ಲಿ ಹೊಸ ಇತಿಹಾಸವನ್ನೇ ಬರೆದಿದೆ. ವಿಶ್ವದಾದ್ಯಂತ ಬಿಡುಗಡೆಗೊಂಡ ಈ ಚಿತ್ರ ಭರ್ಜರಿ ಯಶಸ್ಸು ಗಳಿಸಿದ್ದು, ಒಟಿಟಿ ಪ್ಲಾಟ್ಫಾರಂ ಅಮೆಜಾನ್ ಪ್ರೈಮ್ ನಲ್ಲೂ ಅಸಂಖ್ಯಾತ ವೀಕ್ಷಣೆಗಳನ್ನು ಕಾಣುತ್ತಿದೆ.
ಚಿತ್ರದ ಹೈಲೈಟ್ ಆದ ‘ವರಾಹ ರೂಪಂ’ ಹಾಡಿನ ಕಾನೂನು ಹೋರಾಟದಲ್ಲೂ ‘ಕಾಂತಾರ’ ತಂಡ ಗೆದ್ದಿದ್ದು, ಹೀಗಾಗಿ ಮರು ಸೇರ್ಪಡೆ ಮಾಡಲಾಗಿದೆ. ಇದರ ಮಧ್ಯೆ ‘ಕಾಂತಾರ’ ಯಶಸ್ಸಿನ ಲಾಭ ಪಡೆಯಲು ಕೆಲವರು ಯತ್ನಿಸಿದ್ದು, ಪಂಜುರ್ಲಿ ವೇಷ ಧರಿಸಿ ರೀಲ್ಸ್ ಮಾಡಿದ್ದರು. ಇದಕ್ಕೆ ಆಕ್ರೋಶ ವ್ಯಕ್ತವಾಗುತ್ತಲೆ ಕ್ಷಮೆ ಕೇಳಿದ್ದರು.
ಇದೀಗ ಬಸ್ ಒಂದರ ಮೇಲೆ ಪಂಜುರ್ಲಿ ಚಿತ್ರವನ್ನು ಹಾಕಲಾಗಿದ್ದು, ಇದಕ್ಕೆ ಈಗ ವಿರೋಧ ವ್ಯಕ್ತವಾಗುತ್ತಿದೆ. ಶಿವಮೊಗ್ಗ – ದಾವಣಗೆರೆ ನಡುವೆ ಸಂಚರಿಸುವ ಖಾಸಗಿ ಬಸ್ ಮೇಲೆ ಆರಾಧ್ಯ ದೈವ ಪಂಜುರ್ಲಿ ಚಿತ್ರ ಹಾಕಲಾಗಿದ್ದು, ಪ್ರಯಾಣಿಕರು ಗುಟ್ಕಾ, ಎಲೆ ಅಡಿಕೆ ಜಗಿದು ಉಗುಳುವ ವೇಳೆ ಚಿತ್ರದ ಮೇಲೂ ಬೀಳುವ ಸಾಧ್ಯತೆ ಇರುತ್ತದೆ. ಇದು ದೈವ ನಂಬಿದವರ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕಾರಣ ಕೂಡಲೇ ಅದನ್ನು ತೆಗೆಸುವಂತೆ ಒತ್ತಾಯಿಸಲಾಗುತ್ತಿದೆ.