ಜಮ್ಮು ಮತ್ತು ಕಾಶ್ಮೀರದ ಆಸ್ಪತ್ರೆಯೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಕಾಶ್ಮೀರದ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಬೋನ್ & ಜಾಯಿಂಟ್ ಆಸ್ಪತ್ರೆಯಲ್ಲಿ ರಾತ್ರಿ 9:30ರ ಸುಮಾರಿಗೆ ಬೃಹತ್ ಜ್ವಾಲೆ ಕಾಣಿಸಿಕೊಂಡಿದೆ.
ಕೇವಲ 30 ನಿಮಿಷಗಳಲ್ಲಿ ನಾಲ್ಕು ಅಂತಸ್ತಿನ ಕಟ್ಟಡದ ಮೇಲಿನ ಎರಡು ಮಹಡಿಗಳು ಅಗ್ನಿಗೆ ಆಹುತಿಯಾಗಿವೆ. 110 ರೋಗಿಗಳು ವಾರ್ಡ್ನಲ್ಲಿ ದಾಖಲಾಗಿದ್ದರು. ಇವರಲ್ಲಿ ಕೆಲವರು ಶಸ್ತ್ರಚಿಕಿತ್ಸೆಗೆ ಒಳಗಾದವರೂ ಇದ್ದರು. ಸುಮಾರು 22 ರೋಗಿಗಳನ್ನು ತುರ್ತು ವಿಭಾಗಕ್ಕೆ ದಾಖಲಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಸಂಪೂರ್ಣ ಕಟ್ಟಡ ಬೆಂಕಿಗೆ ಆಹುತಿಯಾಯಿತು. ಕಟ್ಟಡಕ್ಕೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಸ್ಥಳೀಯರು ಅದರಲ್ಲೂ ಮುಖ್ಯವಾಗಿ ಯುವಕರು ರೋಗಿಗಳನ್ನು ಸ್ಥಳಾಂತರಿಸಲು ಹಾಗೂ ಬೆಂಕಿಯನ್ನು ನಂದಿಸಲು ಎನ್ಡಿಆರ್ಎಫ್ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗೆ ನೆರವಾದರು. ಸ್ಥಳೀಯರ ಸಮಯ ಪ್ರಜ್ಞೆಯಿಂದಾಗಿ ನೂರಾರು ರೋಗಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿಯ ಪ್ರಾಣ ಉಳಿಯಿತು ಎಂದು ಎನ್ ಡಿ ಆರ್ ಎಫ್ ಅಧಿಕಾರಿಯೊಬ್ಬರು ಹೇಳಿದರು.