ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಷ್ಟದಲ್ಲಿ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ನಷ್ಟವನ್ನು ಒಂದಷ್ಟು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಸರ್ಕಾರಿ ಬಸ್ ಗಳಿಗೆ ಟೋಲ್ ಗಳಲ್ಲಿ ಶುಲ್ಕ ವಿನಾಯಿತಿ ನೀಡಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದು ಹೇಳಲಾಗಿತ್ತು.
ಇದರ ಮಧ್ಯೆ ನಿಗಮದ ನಡೆಯೊಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಖಾಸಗೀಕರಣದತ್ತ ಹೆಜ್ಜೆ ಇಟ್ಟಿದೆಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ. 350 ಚಾಲಕರನ್ನು ಹೊರಗುತ್ತಿಗೆ ಆಧಾರದ ಮೇಲೆ ಏಜೆನ್ಸಿಯೊಂದರ ಮೂಲಕ ನೇಮಿಸಿಕೊಳ್ಳಲು ನಿರ್ಧರಿಸಿದ್ದು, ಹೀಗಾಗಿ ಈ ಅನುಮಾನ ಮೂಡಿದೆ.
ಆದರೆ ಇದನ್ನು ತಳ್ಳಿ ಹಾಕಿರುವ ಮೂಲಗಳು, ಸಿಬ್ಬಂದಿ ತೀವ್ರ ಕೊರತೆ ಎದುರಿಸುತ್ತಿರುವ ಡಿಪೋಗಳಿಗೆ ಈ ರೀತಿ ನೇಮಕ ಮಾಡಿಕೊಳ್ಳಲು ಟೆಂಡರ್ ಕರೆಯಲಾಗಿದೆ. 350 ಚಾಲಕರ ಪೈಕಿ ಮಂಗಳೂರಿಗೆ 150, ಪುತ್ತೂರು 100, ರಾಮನಗರ ಮತ್ತು ಚಾಮರಾಜನಗರ ವಿಭಾಗಕ್ಕೆ ತಲಾ 50 ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.
ಆರ್ಥಿಕ ಪರಿಸ್ಥಿತಿಯ ಕಾರಣಕ್ಕೆ ರಾಜ್ಯ ಸರ್ಕಾರ ಚಾಲಕರ ನೇಮಕಾತಿಗೆ ಅನುಮೋದನೆ ನೀಡದಿರುವುದರ ಹಿನ್ನೆಲೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಏಜೆನ್ಸಿ ಮೂಲಕ ಈ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.